ತಿರುಗಿಬಿದ್ದ ತನ್ವೀರ್‌ ಸೇಠ್‌ ಬೆಂಬಲಿಗರು: ವಾರ್ಡ್‌, ಬೂತ್‌ ಅಧ್ಯಕ್ಷರ ರಾಜೀನಾಮೆ

ಮೈಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆ ಕೂಗಿದ ಆರೋಪದ ಮೇಲೆ ಅಜೀಜ್‌ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಅಮಾನತುಪಡಿಸಿದ್ದನ್ನು ವಿರೋಧಿಸಿ ನರಸಿಂಹರಾಜ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್, ಬೂತ್‌ಗಳ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ.

ಮೈಸೂರು ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಿಸಾರ್ ಅಹ್ಮದ್ ನೇತೃತ್ವದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಸದಸ್ಯ ರೆಹಮಾನ್ ಖಾನ್, ಕಾರ್ಮಿಕ ಘಟಕದ ಅಧ್ಯಕ್ಷ ರಸೂಲ್, ಅಜೀಜ್‌ಸೇಠ್ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸೈಯದ್ ಇಕ್ಬಾಲ್, ಅಜೀಜ್‌ಸೇಠ್ ಬ್ಲಾಕ್‌ಗೆ ಸೇರಿದ ೯ ವಾರ್ಡ್‌ಗಳ ಅಧ್ಯಕ್ಷರಾದ ರಫೀಕ್ ಅಹ್ಮದ್, ಎಂ.ಡಿ.ರಸೂಲ್, ಮೊಹಮ್ಮದ್ ಅಹಮದ್, ಖಲೀಲ್ ಉಲ್ ರೆಹಮಾನ್, ಇರ್ಫಾನ್, ರಾಘವ, ಮೊಹಮ್ಮದ್ ಅವೇಜ್, ಅಪ್ಸರ್‌ಪಾಷ, ಮಿರಾಜುದ್ದೀನ್ ಸೇರಿದಂತೆ ವಿವಿಧ ಬೂತ್‌ಗಳ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅಜೀಜ್‌ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖಾದರ್ ಶಾಹೀದ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಆದರೆ, ವಿವರಣೆ ಕೊಡುವ ಮುನ್ನವೇ ಅಮಾನತುಪಡಿಸಿರುವುದು ಸರಿಯಲ್ಲ. ಉತ್ತರ ಕೊಡುವ ತನಕ ಕಾಯದೆ ತರಾತುರಿಯಲ್ಲಿ ಶಿಸ್ತುಕ್ರಮಕೈಗೊಂಡಿದ್ದನ್ನು ವಿರೋಧಿಸಿ ರಾಜೀನಾಮೆ ಕೊಡಲಾಗಿದೆ ಎಂದು ಸೈಯದ್ ಇಕ್ಬಾಲ್ ದೂರಿದರು.

ಈ ರಾಜೀನಾಮೆ ಪತ್ರವನ್ನು ಸ್ವೀಕರಿಸಿರುವ ಅಧ್ಯಕ್ಷರು ಯಾವುದೇ ನಿರ್ಧಾರ ಮಾಡಿಲ್ಲ. ರಾಜೀನಾಮೆ ಕೊಟ್ಟಿರುವ ಪದಾಧಿಕಾರಿಗಳು ಅವರೇನಾ ಅಥವಾ ಬೇರೆಯವರು ಕೊಟ್ಟಿರಬಹುದೇ ಎಂಬುದನ್ನು ಪರಿಶೀಲಿಸಿ ತೀರ್ಮಾನ ಮಾಡಬೇಕಾಗಿದೆ. ಕಾರ್ಮಿಕ ಘಟಕದ ಅಧ್ಯಕ್ಷರು ನೇಮಕವಾದ ಮೇಲೆ ಸಕ್ರಿಯವಾಗಿಲ್ಲದ ಕಾರಣ ಬದಲಿಸಿ ಬೇರೊಬ್ಬರನ್ನು ನೇಮಿಸುವ ಚಿಂತನೆ ಮಾಡಿತ್ತು. ಈಗ ಅವರೇ ಕೊಟ್ಟಿರುವುದರಿಂದ ಮುಂದೆ ತೀರ್ಮಾನ ಮಾಡಲಾಗುವುದು ಎಂದು ನಗರ ಅಧ್ಯಕ್ಷ ಆರ್.ಮೂರ್ತಿ ತಿಳಿಸಿದರು.

× Chat with us