ತಮಿಳುನಾಡು ವಿಧಾನಸಭೆಯಲ್ಲಿ ನೀಟ್ ಪರೀಕ್ಷೆ ವಿರುದ್ಧ ನಿರ್ಣಯ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ. ಕೆ.ಸ್ಟಾಲಿನ್ ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ (ನೀಟ್) ವಿರುದ್ಧ ನಿರ್ಣಯ ಮಂಡಿಸಿದ್ದಾರೆ. ಗೊತ್ತುವಳಿ ಮಂಡನೆಯ ವೇಳೆ ವಿರೋಧ ಪಕ್ಷವಾದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಸದಸ್ಯರು ಸಭಾತ್ಯಾಗ ಮಾಡಿದ್ದಾರೆ.

ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಭಾನುವಾರ ನೀಟ್ ಪರೀಕ್ಷೆ ಆರಂಭವಾಗುವುದಕ್ಕಿಂತ ಕೆಲವೇ ಗಂಟೆಗಳ ಮೊದಲು ೨೦ ವರ್ಷದ ವಿದ್ಯಾರ್ಥಿ ಆತ್ಮಹತ್ಯೆಯಿಂದ ಸಾವಿಗೀಡಾದ ಪ್ರಕರಣದ ಮರುದಿನವೇ ಈ ಗೊತ್ತುವಳಿ ಮಂಡನೆಯಾಗಿದೆ.

ವಿಧಾನಸಭೆಯಲ್ಲಿ ಮಾತನಾಡಿರುವ ಸ್ಟಾಲಿನ್ ನಾನು ನೀಟ್ ವಿರುದ್ಧ ನಿರ್ಣಯವನ್ನು ಮಂಡಿಸಿದ್ದೇನೆ. ಈ ನಿರ್ಣಯವು ಸಾಮಾಜಿಕ ನ್ಯಾಯವನ್ನು ಖಚಿತಪಡಿಸುತ್ತದೆ, ಸಮಾನತೆ ಮತ್ತು ಸಮಾನ ಅವಕಾಶವನ್ನು ಎತ್ತಿಹಿಡಿಯುತ್ತದೆ, ಎಲ್ಲಾ ದುರ್ಬಲ ವಿದ್ಯಾರ್ಥಿ ಸಮುದಾಯಗಳನ್ನು ತಾರತಮ್ಯದಿಂದ ರಕ್ಷಿಸುತ್ತದೆ. ಅಲ್ಲದೆ, ಅವರನ್ನು ವೈದ್ಯಕೀಯ ಮತ್ತು ದಂತ ಶಿಕ್ಷಣದ ಮುಖ್ಯವಾಹಿನಿಗೆ ತರುತ್ತದೆ. ರಾಜ್ಯಾದ್ಯಂತ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆಯನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿ ಸಾವಿಗೆ ಸಂತಾಪ ಸೂಚಿಸಿರುವ ಅವರು, ನೀಟ್ ವಿರುದ್ಧ ಕಾನೂನು ಸಮರವು ಈ ಮಸೂದೆಯಿಂದ ಆರಂಭವಾಗಿದೆ ಎಂದಿದ್ದಾರೆ.

ಈ ನಡುವೆ ಮಸೂದೆ ಮಂಡನೆಯ ವೇಳೆ ಎಐಎಡಿಎಂಕೆ ವಿಧಾನಸಭೆಯಿಂದ ಹೊರನಡೆದಿದೆ. ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ವಿದ್ಯಾರ್ಥಿಯ ಆತ್ಮಹತ್ಯೆ ಕುರಿತು ಚರ್ಚಿಸಲು ಅವಕಾಶವನ್ನು ಒದಗಿಸಿಲ್ಲ ಎಂದು ಆರೋಪಿಸಿದ್ದಾರೆ.

× Chat with us