ಕಣ್ಣೂರು ಗ್ರಾಪಂ ಅಧಿಕಾರಕ್ಕಾಗಿ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ: ವಿಡಿಯೋ ವೈರಲ್

ಹನೂರು/ಚಾಮರಾಜನಗರ: ಹನೂರು ತಾಲ್ಲೂಕಿನ ಕಣ್ಣೂರು ಗ್ರಾಮ ಪಂಚಾಯಿತಿಯ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಹಂಚಿಕೆ ವಿಚಾರವಾಗಿ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಕರ್ಪೂರ ಹಚ್ಚಿ ಆಣೆ ಪ್ರಮಾಣ ಮಾಡುತ್ತಿರುವ ಎರಡು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚೆನ್ನಾಲಿಂಗನಹಳ್ಳಿ, ಜಿ.ಕೆ.ಹೊಸೂರು, ಶಿವಪುರ ಗ್ರಾಮವನ್ನೂ ಒಳಗೊಂಡ ಕಣ್ಣೂರು ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 15 ಸದಸ್ಯ ಸ್ಥಾನಗಳಿದ್ದು, ಈಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಬೆಂಬಲಿತ ತಲಾ ಐದು ಸದಸ್ಯರು ಗೆಲುವು ಸಾಧಿಸಿದ್ದಾರೆ. ಗ್ರಾಪಂ ಅಧಿಕಾರ ಹಿಡಿಯಲು ಒಟ್ಟು ಎಂಟು ಮತಗಳು ಬೇಕು.

ಗ್ರಾಪಂನಲ್ಲಿ ಮೈತ್ರಿ ವಾಡಿಕೊಂಡು ಅಧಿಕಾರ ಹಿಡಿಯಲು ಜೆಡಿಎಸ್-ಬಿಜೆಪಿ ಬೆಂಬಲಿತರು ನಿರ್ಧರಿಸಿ, ಪ್ರವಾಸಕ್ಕೂ ತೆರಳಿದ್ದರು. ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದೇವಸ್ಥಾನದ ಹೊರಭಾಗದಲ್ಲಿ ಕರ್ಪೂರ ಹಚ್ಚಿ ಮಾತಿಗೆ ಬದ್ಧರಾಗಿರುತ್ತೇವೆ ಎಂದು ಬಿಜೆಪಿ ಬೆಂಬಲಿತ ಐವರು ಹಾಗೂ ಜೆಡಿಎಸ್ ಬೆಂಬಲಿತ ನಾಲ್ವರು ಹೇಳುತ್ತಿರುವುದು ವಿಡಿಯೋದಲ್ಲಿದ್ದು, ಎಲ್ಲೆಡೆ ಹರಿದಾಡುತ್ತಿದೆ. ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ.

ವಿಡಿಯೋ ಸಾರಂಶ: ಎರಡೂವರೆ ವರ್ಷದ ಅವಧಿಯಲ್ಲಿ ಬಸವಣ್ಣ ಅವರಿಗೆ 10 ತಿಂಗಳು, ಮಮತಾರಾಣಿ ಮಲ್ಲಣ್ಣ ಎಂಬವರಿಗೆ 12 ತಿಂಗಳು ಹಾಗೂ ಕೊನೆಯ 8 ತಿಂಗಳು ಶಭಾನ ಖಾನ್ ಅಫ್ರಾನ್ ಅವರಿಗೆ ಅಧ್ಯಕ್ಷ ಸ್ಥಾನ ನೀಡುವುದು ಮತ್ತು ಅದೇ ರೀತಿ ಉಪಾಧ್ಯಕ್ಷ ಸ್ಥಾನ 18 ತಿಂಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ, ಉಳಿದ 10 ತಿಂಗಳು ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗೆ. ಹೀಗೆ ಒಟ್ಟು ಐದು ವರ್ಷ ಬಿಜೆಪಿ-ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಮೈತ್ರಿಯಿಂದ ಅಧಿಕಾರ ನಡೆಸಲಿದ್ದಾರೆ ಎಂದು ಮಂಜುನಾಥ ಸ್ವಾಮಿ ಸಾಕ್ಷಿಯಾಗಿ ಪ್ರಮಾಣ ಮಾಡುತ್ತೇನೆ. ಈ ಮಾತಿಗೆ ಎಲ್ಲರೂ ಮನ್ನಣೆ ಕೊಡಬೇಕು. ಯಾವುದೇ ಕೆಲಸ ಕಾರ್ಯ ಬಂದರೂ ೫೦:೫೦ ಹಂಚಿಕೊಳ್ಳೊಣ. ದಯಮಾಡಿ ಯಾವುದೇ ಆಮಿಷಕ್ಕೆ ಬಲಿಯಾಗಬೇಡಿ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಈ ಮಾತಿನಂತೆ ನಾನು ಇದಕ್ಕೆ ಒಪ್ಪಿಕೊಂಡಿದ್ದೇನೆ. ಈಗ ನಾವು 9 ಮಂದಿ ಇದ್ದೇವೆ. ಜೆಡಿಎಸ್‌ ಬೆಂಬಲಿತ ಮತ್ತೊಬ್ಬ ಸದಸ್ಯ ಜಿ. ರಮೇಶ್ ಪ್ರವಾಸಕ್ಕೆ ಬಂದಿಲ್ಲ. ಅವರೂ ನಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಬಿಜೆಪಿ ಮುಖಂಡ ಕೆ.ಎಂ.ಬಸವರಾಜಪ್ಪ ಹೇಳುತ್ತಿರುವುದು ವಿಡಿಯೋದಲ್ಲಿದೆ.

ದೇವಸ್ಥಾನನದಲ್ಲಿ ಆಣೆ ಮಾಡಿದ್ದೇವೆ. ಇಲ್ಲಿಂದ ಅಲ್ಲಿ ಹೋಗಿ ಯಾರಾದರೂ ಉಲ್ಟಾ ಹೊಡೆದರೆ ಅವರ ಮನೆ ಮುರಿದು ಹೋಗುತ್ತದೆ ಎಂದು ಮತ್ತೊಬ್ಬ ಮುಖಂಡ ಫೈರೋಜ್ ಬೆದರಿಕೆ ಹಾಕುವ ದೃಶ್ಯ ವಿಡಿಯೋದಲ್ಲಿದೆ.

× Chat with us