ಬಿಜೆಪಿ ಸೇರಿದ ಡಿಎಂಕೆಯ ಉಚ್ಚಾಟಿತ ನಾಯಕ ರಾಮಲಿಂಗಂ

ಚೆನ್ನೈ: ತಮಿಳುನಾಡು ಡಿಎಂಕೆ ಪಕ್ಷದಿಂದ ಉಚ್ಚಾಟನೆಗೊಂಡಿರುವ ಮಾಜಿ ಸಂಸದ ಕೆ.ಪಿ.ರಾಮಲಿಂಗಂ ಅವರು ಶನಿವಾರ ಬಿಜೆಪಿ ಸೇರಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಪಕ್ಷದ ಪ್ರಮಾಣ ಪತ್ರವನ್ನು ರಾಮಲಿಂಗಂ ಅವರಿಗೆ ನೀಡಿದರು.
ಬಿಜೆಪಿ ಸೇರಿದ ನಂತರ ಮಾತನಾಡಿದ ರಾಮಲಿಂಗಂ, ʻಬಿಜೆಪಿ ಪಕ್ಷದ ಏಳಿಗೆಗಾಗಿ ಶ್ರಮಿಸುತ್ತೇನೆʼ ಎಂದು ತಿಳಿಸಿದರು.

ʻ30 ವರ್ಷಗಳ ಕಾಲ ಡಿಎಂಕೆಯಲ್ಲಿದ್ದು, ಏಳು ಚುನಾವಣೆಗಳನ್ನು ಎದುರಿಸಿದ್ದೇನೆ. ಕೋವಿಡ್‌ ಸಂದರ್ಭದಲ್ಲಿ ಡಿಎಂಕೆ ಸಭೆ ಕರೆಯಿತು. ಸಭೆ ವಿರುದ್ಧ ನಾನು ಹೇಳಿಕೆ ನೀಡಿದ ಪರಿಣಾಮ ಪಕ್ಷದಿಂದ ಉಚ್ಚಾಟನೆಗೊಳ್ಳಬೇಕಾಯಿತುʼ ಎಂದು ಹೇಳಿದರು.

ʻಎಂ.ಕೆ.ಅಳಗಿರಿ (ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಸಹೋದರ) ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ. ಅವರನ್ನೂ ಬಿಜೆಪಿಗೆ ಕರೆತರಲು ಪ್ರಯತ್ನಿಸುತ್ತೇನೆʼ ಎಂದರು.

× Chat with us