ಖಾರ್ಟೂಮ್ : ಪರಸ್ಪರ ಗುಂಡಿನ ಚಕಮಕಿ, ಶೆಲ್ ದಾಳಿಯಿಂದ ಜನರನ್ನು ಆತಂಕಕ್ಕೆ ದೂಡಿದ್ದ ಸುಡಾನ್‌ನ ಸೇನೆ ಮತ್ತು ಅರೆ ಸೇನಾಪಡೆ 24 ಗಂಟೆ ಕದನವಿರಾಮ ಘೋಷಿಸಲು ಸಮ್ಮತಿಸಿವೆ.
ಮಂಗಳವಾರ ಸಂಜೆಯಿಂದ ಕದನ ವಿರಾಮ ಜಾರಿಗೆ ಬಂದಿದೆ. ಇದಕ್ಕೆ ಉಭಯ ಬಣಗಳು ಒಪ್ಪಿವೆ ಎಂದು ಸೇನೆಯ ಉನ್ನತಾಧಿಕಾರಿ ಶಾಮ್ಸ್ ಎಲ್ ದಿನ್ ಕಬ್ಬಾಷಿ ಅವರ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಸಂಘರ್ಷ ಶನಿವಾರ ಆರಂಭವಾಗಿತ್ತು.
ರಾಜಧಾನಿ ಖಾರ್ಟೂಮ್ ಮತ್ತು ಇತರ ನಗರಗಳಲ್ಲಿ ಗುಂಡಿನ ದಾಳಿ, ಸ್ಫೋಟಕ್ಕೆ ಸಂಬಂಧಿಸಿದ ಶಬ್ದ ಮಂಗಳವಾರವೂ ಮುಂದುವರಿದಿತ್ತು. ಹಿಂಸೆಗೆ ಬಲಿಯಾದವರ ಸಂಖ್ಯೆ 200ರ ಗಡಿ ದಾಟಿದೆ. ಗಾಯಾಳುಗಳ ಸಂಖ್ಯೆ 1,800ಕ್ಕೂ ಹೆಚ್ಚಾಗಿದೆ. ವೈದ್ಯರು ನೀಡಿದ ಮಾಹಿತಿ ಪ್ರಕಾರ, ಮೃತರಲ್ಲಿ 97 ನಾಗರಿಕರು ಸೇರಿದ್ದಾರೆ ಎಂದು ವರದಿ ತಿಳಿಸಿದೆ.
ಭೀತಿಗೆ ಒಳಗಾಗಿದ್ದ ಲಕ್ಷಾಂತರ ಜನರು ಮನೆಯೊಳಗೆ ಅಡಗಿಕೊಂಡಿದ್ದರು. ರಾಜಧಾನಿಯಿಂದ ಸುರಕ್ಷಿತ ಸ್ಥಳಗಳಿಗೆ ಗುಳೆ ಹೊರಟಿದ್ದರು. ಲಗೇಜು, ಕುಟುಂಬ ಸದಸ್ಯರೊಂದಿಗೆ ಜನರು ಗುಳೆ ಹೊರಟ್ಟಿದ್ದ ದೃಶ್ಯಗಳು ಕಂಡವು. ಉಭಯ ಬಣಗಳ ಯೋಧರು ದಟ್ಟ ಜನವಸತಿ ಇರುವ ಪ್ರದೇಶಗಳಲ್ಲೂ ಟ್ಯಾಂಕರ್‌ಗಳು, ಶಸ್ತ್ರಾಸ್ತ್ರ ಬಳಸುತ್ತಿವೆ. ತಲಾ 10 ಸಾವಿರಕ್ಕೂ ಅಧಿಕ ಯೋಧರು ಶಸ್ತ್ರಸಜ್ಜಿತರಾಗಿ ರಸ್ತೆಗಿಳಿದಿದ್ದಾರೆ.
ಅನಿಶ್ಚಿತ ಪರಿಸ್ಥಿತಿಯ ಪರಿಣಾಮ ಆಸ್ಪತ್ರೆಗಳಿಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಗಾಯಗೊಂಡವರ ಸಂಖ್ಯೆಯು ಹೆಚ್ಚಾಗಿದೆ. ಕಾರ್ಯದೊತ್ತಡದ ಪರಿಣಾಮ, ಅನೇಕ ಆಸ್ಪತ್ರೆಗಳು ಬಾಗಿಲು ಬಂದ್ ಮಾಡಿವೆ ಎಂದು ವರದಿ ತಿಳಿಸಿದೆ.
ಖಾರ್ಟೂಮ್‌ನಲ್ಲಿರುವ ಸೇನಾ ಕೇಂದ್ರ ಕಚೇರಿ ಸಂಘರ್ಷದ ಕೇಂದ್ರ ತಾಣವೂ ಆಗಿದ್ದು, ಶೆಲ್ ಪ್ರಯೋಗ, ಗುಂಡಿನ ದಾಳಿಗೆ ಸಾಕ್ಷಿಯಾಗಿ ದಟ್ಟ ಬಿಳಿ ಹೊಗೆ ಆಗಸವನ್ನು ಸೇರುತ್ತಿದೆ.
88 ವಿದ್ಯಾರ್ಥಿಗಳು ಅತಂತ್ರ: ಖಾರ್ಟೂಮ್ ವಿ.ವಿ. ಗ್ರಂಥಾಲಯದಲ್ಲಿ 88 ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಎರಡು ದಿನದ ಹಿಂದೆ ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದ. ನೀರು, ಅಹಾರದ ಅಭಾವವಿದ್ದು, ಎಲ್ಲರು ನೆಲದ ಮೇಲೆ ಮಲಗಿರುವ ವಿಡಿಯೊ ಜಾಲತಾಣದಲ್ಲಿ ಹಂಚಿಕೆಯಾಗಿದೆ.
ಅಮೆರಿಕದ ರಾಯಭಾರಿ ಕಚೇರಿಯ ಹಿರಿಯ ಅಧಿಕಾರಿ, ಐರೋಪ್ಯ ರಾಷ್ಟ್ರಗಳ ರಾಜತಾಂತ್ರಿಕರ ನಿವಾಸದ ಬಳಿಯೂ ಶೆಲ್ ದಾಳಿ ನಡೆದಿದ್ದು, ಆತಂಕವನ್ನು ಹೆಚ್ಚಿಸಿದೆ.
ಶರಣಾಗತಿಗೆ ಸೇನಾ ಮುಖ್ಯಸ್ಥರ ಪಟ್ಟು : ಸೇನಾ ಮುಖ್ಯಸ್ಥ ಜನರಲ್ ಅಬ್ದೆಲ್ ಫತ್ಹಾ ಬುರ‍್ರಾನ್ ಮತ್ತು ಅರೆಸೇನಾ ಪಡೆ ಮುಖ್ಯಸ್ಥ ಜನರಲ್ ಮೊಹಮ್ದ್ ಹಮ್ದನ್ ಡಾಗಲೊ ನಡುವಣ ಅಧಿಕಾರಕ್ಕಾಗಿ ಕಿತ್ತಾಟ, ದೇಶವನ್ನು ಆತಂಕಕ್ಕೆ ದೂಡಿದೆ.
ಈ ಇಬ್ಬರೂ ಜೊತೆಗೂಡಿಯೇ 2021ರಲ್ಲಿ ಸೇನಾದಂಗೆ ಮಾಡಿದ್ದು, ಚುನಾಯಿತ ಸರ್ಕಾರ ಪದಚ್ಯುತಿಗೊಳಿಸಿ ಅಧಿಕಾರ ಕೈವಶ ಮಾಡಿಕೊಂಡಿದ್ದರು. ಈಗ ಇಬ್ಬರ ನಡುವೆಯೇ ಅಧಿಕಾರಕ್ಕಾಗಿ ಸಂಘರ್ಷ ನಡೆದಿದೆ.
ಈ ಇಬ್ಬರ ಕೈಕೆಳಗೂ ತಲಾ 10 ಸಾವಿರದಷ್ಟು ಯೋಧರಿರುವ ಪಡೆಗಳು ಇವೆ. ಯೋಧರು ನಾಯಕರ ಪರ ಶಸ್ತ್ರಾಸ್ತ್ರದೊಂದಿಗೆ ಬೀದಿಗೆ ಇಳಿದಿದ್ದಾರೆ. ಸುಡಾನ್ ಸುಮಾರು 1.6 ಕೋಟಿ ಜನಸಂಖ್ಯೆ ಹೊಂದಿದೆ. ಆಫ್ರಿಕಾದ ಮೂರನೇ ಅತಿದೊಡ್ಡ ಮತ್ತು ಸಂಪನ್ಮೂಲಭರಿತ ದೇಶವಾಗಿದೆ. ಘರ್ಷಣೆಯಿಂದಾಗಿ ಈಗ ಮಾನವೀಯ ನೆರವನ್ನು ಅವಲಂಬಿಸಿದೆ.
ಶಸ್ತ್ರತ್ಯಾಗಕ್ಕೆ ಅಮೆರಿಕ, ಜಿ 7 ಶೃಂಗದ ಆಗ್ರಹ : ಸುಡಾನ್‌ನಲ್ಲಿ ಕದನ ವಿರಾಮದ ಜೊತೆಗೆ ಶಸ್ತ್ರತ್ಯಾಗ ಮಾಡಬೇಕು ಎಂಬ ಒತ್ತಾಯ ಅಂತರರಾಷ್ಟ್ರೀಯ ಸಮುದಾಯದಿಂದ ತೀವ್ರವಾಗಿದೆ. ಅಮೆರಿಕ, ವಿಶ್ವಸಂಸ್ಥೆ, ಹಲವು ರಾಷ್ಟ್ರಗಳು ಈ ಆಗ್ರಹ ಮಾಡಿವೆ.
ಸುಡಾನ್‌ನ ಸೇನೆಗೆ ಬೆಂಬಲವಾಗಿ ನಿಂತಿರುವ ಈಜಿಪ್ಟ್ ಮತ್ತು ಅರೆಸೇನಾ ಪಡೆಯಾದ ಆರ್‌ಎಸ್‌ಎಫ್‌ಗೆ ಬೆನ್ನೆಲುಬಾಗಿರುವ ಸೌದಿ ಅರೇಬಿಯಾ, ಯುಎಇ ಕೂಡಾ ಉಭಯಬಣಗಳಿಗೆ ಶಸ್ತ್ರತ್ಯಾಗಕ್ಕೆ ಮನವಿ ಮಾಡಿವೆ.
ಬೆಂಗಳೂರು : 2026-31ನೇ ಸಾಲಿನ ಗ್ರಾಮ ಪಂಚಾಯ್ತಿಗಳ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಹಾಗೂ…
ಬೆಂಗಳೂರು : ಹಳ್ಳಿಯಿಂದ ದಿಲ್ಲಿಯೇ ಹೊರತು, ದಿಲ್ಲಿಯಿಂದ ಹಳ್ಳಿ ಅಲ್ಲ ಎಂದು ಪ್ರತಿಪಾದಿಸಿದ ಮಹಾತ್ಮಾ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕಲ್ಪನೆಗೆ…
ಕೊಳ್ಳೇಗಾಲ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಮದುವೆಯ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಏಕಾಏಕಿ ದಾಳಿ…
ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ರಾಜಶೇಖರ ಮೂರ್ತಿ ಎಂಬುವವರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ್ದು, ಅದೃಷ್ಟವಶಾತ್ ರೈತ…
ಹೊಸದಿಲ್ಲಿ : ರಾಷ್ಟ್ರಪಿತಿ ಮಹಾತ್ಮ ಗಾಂಧಿ ಅವರ 78ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಇಂದು ರಾಷ್ಟ್ರಪತಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ…
ಮೈಸೂರು : ಮೈಸೂರಿನಲ್ಲಿ ಡ್ರಗ್ಸ್ ತಯಾರು ಮಾಡುವ ಯಾವ ವಸ್ತುಗಳ ಸಹ ಸಿಕ್ಕಿಲ್ಲ. ಎನ್.ಸಿ.ಬಿ ಅಧಿಕಾರಿಗಳು ದಾಳಿ ಮಾಡಿರುವುದು ಫಾಲೋಅಪ್…