ನಂಜನಗೂಡು: ರಸ್ತೆಗಾಗಿ ಬೀದಿಗಿಳಿದು ಪ್ರತಿಭಟಿಸಿದ ವಿದ್ಯಾರ್ಥಿಗಳು!

ನಂಜನಗೂಡು: ೨೩೪ ಮಕ್ಕಳು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಪ್ರೌಢಶಾಲೆಗೆ ರಸ್ತೆಯೇ ಇಲ್ಲ ಎಂದು ಆರೋಪಿಸಿ ತಾಲ್ಲೂಕಿನ ಕುಪ್ಪರವಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಸೋಮವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಸೋಮವಾರ ಶಾಲೆಗೆ ಬರಲು ವಿದ್ಯಾರ್ಥಿಗಳು ಖಾಸಗಿ ಜಮೀನನ್ನು ತುಳಿದು ಬರಬೇಕಾದರೆ ಜಮೀನಿನ ಮಾಲೀಕರು ಮಕ್ಕಳ  ಮೇಲೆ ರೇಗಾಡಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಲು ಶಾಲೆಗೆ ತೆರಳಲು ರಸ್ತೆ ನಿರ್ಮಿಸಬೇಕೆಂದು ಆಗ್ರಹಿಸಿ ಘೋಷಣೆ ಕೂಗುತ್ತಾ ಪ್ರತಿಭಟನೆ ಆರಂಭಿಸಿದರು.

೨೦೧೨ರಲ್ಲಿ ಸರ್ಕಾರಿ ಪ್ರೌಢಶಾಲೆಯನ್ನು ಸ್ಥಾಪಿಸಿದ ಸರ್ಕಾರ ೨೦೧೫ರಲ್ಲಿ ಶಾಲಾ ಕಟ್ಟಡವನ್ನೂ ನಿರ್ಮಿಸಿತು. ಹಸಿರು ಹೊಲದ ಮಧ್ಯೆ ಶಾಲಾ ಕಟ್ಟಡವೇನೂ ನಿರ್ಮಾಣವಾಯಿತು. ಆದರೆ ಅದಕ್ಕೆ ದಾರಿ ಮಾಡುವುದನ್ನು ಸರ್ಕಾರ ಹಾಗೂ ಅಕಾರಿಗಳು ಮರೆತಿದ್ದರು. ವರ್ಷಗಳ ಹಿಂದೆ ಶಾಲೆಗೆ  ಪೋಷಕರೇ ನಿಂತು ಮಾಡಿದ್ದ ಸಣ್ಣ ಕಿರುದಾರಿ ಈಗ ಮತ್ತೆ ಜಮೀನಾಗಿದ್ದು ಮಕ್ಕಳು ಶಾಲೆಗೆ ಬರಲು ದಾರಿಯೇ ಇಲ್ಲವಾಯಿತು.

ಕೊರೊನಾದಿಂದಾಗಿ ಶಾಲೆಯತ್ತ ಶಿಕ್ಷಕರು ಮತ್ತು ಮಕ್ಕಳು ಮುಖ ಮಾಡದಿರುವ ಸಮಯವನ್ನೇ ನೋಡಿಕೊಂಡ ಅಕ್ಕ ಪಕ್ಕದ ಜಮೀನಿನ ಮಾಲೀಕರು ಕಿರುದಾರಿಯನ್ನು ಜಮೀನಿಗೆ ಒಳಪಡಿಸಿಕೊಂಡಾಗ ಮಕ್ಕಳ ಪಾಲಿಗೆ ಕಂಡವರ ಜಮೀನೇ ದಾರಿಯಾಯಿತು.

 ಇದೇ ರೀತಿ ಜಮೀನಿನ ಮೇಲೆ ಹಾದು ಬರುತ್ತಿದ್ದಾಗ ಜಮೀನಿನ ಮಾಲೀಕರು ರೇಗಾಡಿದ್ದರಿಂದ ಬೇರೆ ದಾರಿ ಕಾಣದ ಕುಪ್ಪರವಳ್ಳಿ ಶಾಲೆ ಮಕ್ಕಳು ವಾಪಸ್ ನಂಜನಗೂಡುನರಸೀಪುರ ರಸ್ತೆಗೆ ಬಂದು ಅಲ್ಲಿ ರಸ್ತೆ ತಡೆ ನಡೆಸಿ ಧರಣಿ ಆರಂಭಿಸಿದರು.

ನಂತರ ಶಾಲೆಗೆ ಆಗಮಿಸಿದ ಶಿಕ್ಷಕರು, ರೀತಿ ಏಕಾಏಕಿ ರಸ್ತೆ ತಡೆ ನಡೆಸುವುದು ತಪ್ಪುರಸ್ತೆ ನಿಮ್ಮ ಹಕ್ಕಾದರೂ ಅಕಾರಿಗಳ ಗಮನಕ್ಕೆ ತಂದು ಪ್ರತಿಭಟನೆ ನಡೆಸಬೇಕು. ನಾಳೆ ನಿಮ್ಮ ಪಾಲಕರ ಸಭೆ ಕರೆಯಲಾಗುವುದು. ಅಲ್ಲಿ ರಸ್ತೆ ಕುರಿತು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಿ ಎಂದು ಅವರ ಮನವೊಲಿಸಿ ಜಮೀನಿನ ಮುಖಾಂತರವೇ ಶಾಲೆಗೆ ಮಕ್ಕಳನ್ನು ಕರೆ ತಂದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಗೌತಮಿ, ವಿಜಯಲಕ್ಷ್ಮಿ, ಪುನೀತ್, ನಿತಿನ್, ರಾಜೇಶ, ಭವಾನಿ, ಮಾದೇಶ, ಸಿದ್ದರಾಜಮ್ಮ ಇತರರು ಭಾಗಿಯಾಗಿದ್ದರು.

`ರಸ್ತೆ ನಿರ್ಮಿಸಿಕೊಡಲು ಶಾಸಕ ಡಾ.ಯತೀಂದ್ರ ಅವರು ಈಗಾಗಲೆ ಸೂಚನೆ ನೀಡಿದ್ದು, ಗ್ರಾಮಸ್ಥರು ಮುಂದೆ ನಿಂತು ನರೇಗಾ ಯೋಜನೆಯಲ್ಲಿ ರಸ್ತೆ ನಿರ್ಮಿಸುವುದಾದಲ್ಲಿ ಪಂಚಾಯಿತಿ ಹಣ ಪಾವತಿಸಿಲು ಸಿದ್ಧವಿದೆ. ರಸ್ತೆಗಾಗಿ ಜಾಗದ ಪರಿಶೀಲನೆಯನ್ನು ನಾಳೆಯೇ ನಡೆಸಲಾಗುವುದು’.

ಗಣೇಶ, ಪಿಡಿಒ, ಬಿಳಿಗೆರೆ ಗ್ರಾಪಂ.

 

× Chat with us