ಉತ್ಸಾಹಿ, ಕ್ರಿಯಾಶೀಲ ಅಧಿಕಾರಿಗಳ ನಡುವಿನ ಅನಗತ್ಯ ಸಂಘರ್ಷ

ಆಡಳಿತ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ನಡುವೆ ಸಂಘರ್ಷ, ವೈಮನಸ್ಸು, ಕಿತ್ತಾಟವನ್ನು ನಾವು ಗಮನಿಸಿರುತ್ತೇವೆ. ಆದರೆ, ಅಧಿಕಾರಿಗಳೇ ಪರಸ್ಪರ ಸಂಘರ್ಷಕ್ಕೆ ಇಳಿಯುವ ಪ್ರಸಂಗಗಳು ಇರುವುದಿಲ್ಲ. ಇದ್ದರೂ ತುಂಬಾ ಕಡಿಮೆ. ಆದರೆ, ಕೋವಿಡ್‌ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಂತಹ ಪ್ರಸಂಗಗಳು ನಡೆದಾಗ ಆಡಳಿತ ವ್ಯವಸ್ಥೆ ಬಗ್ಗೆ ಬೇಸರ ಮೂಡುವುದು ಸಹಜ. ಆಡಳಿತದಲ್ಲಿ ಹಸ್ತಕ್ಷೇಪ, ಒತ್ತಡ ಹಾಕುತ್ತಿದ್ದಾರೆಂದು ಮೈಸೂರು ಜಿಲ್ಲಾಧಿಕಾರಿ ವಿರುದ್ಧ ನಗರಪಾಲಿಕೆ ಆಯುಕ್ತರು ಗಂಭೀರ ಆರೋಪ ಮಾಡಿ ತಮ್ಮ ಸ್ಥಾನಕ್ಕೇ ರಾಜೀನಾಮೆ ನೀಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ರಾಜಕೀಯ, ಆಡಳಿತ ಪಲ್ಲಟ ಏರ್ಪಟ್ಟಿದೆ. ಟೀಕೆಗಳು, ವಿಶ್ಲೇಷಣೆಗಳೂ ವ್ಯಕ್ತವಾಗಿವೆ. ಈ ಅನಿರೀಕ್ಷಿತ ಬೆಳವಣಿಗೆ ಬಗ್ಗೆ ಲೇಖಕರಾದ ವಿಲ್ಫ್ರೆಡ್‌ ಡಿಸೋಜಾ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಭಾರತ ಆಡಳಿತ ಸೇವೆಯ ಈ ಇಬ್ಬರು ಉತ್ಸಾಹೀ, ಕ್ರಿಯಾಶೀಲ ಯುವ ಅಧಿಕಾರಿಗಳು ಅನಪೇಕ್ಷಿತ ಸಂಘರ್ಷದ ಸುಳಿಗೆ ಸಿಲುಕಿದ್ದಾರೆ. ಕೆಲವು ಇವರನ್ನು ಸುಳಿಯ ಸೆಳೆತಕ್ಕೆ ದೂಡಿರುವ ಕೆಲವು ಪ್ರಬಲ ರಾಜಕೀಯ ಹಿತಾಸಕ್ತರು ತಮ್ಮ ಬೇಳೆ ಬೇಯಿಸಿಕೊಳ್ಳುವ ತವಕದಲ್ಲಿದ್ದಾರೆ.

ರೋಹಿಣಿ ಸಿಂಧೂರಿ ಮತ್ತು ಶಿಲ್ಪಾ ನಾಗ್.., ಇಬ್ಬರೂ ನನಗೆ ಒಂದಿಷ್ಟು ಪರಿಚಯ ಇರುವ ಅಧಿಕಾರಿಗಳು. ನನಗೆ ಇಬ್ಬರ ಮೇಲೂ ಗೌರವ ಇದೆ. ಶಿಲ್ಪಾ ನಾಗ್ ಅವರ ಮೇಲಿನ ಗೌರವ ಸ್ವಲ್ಪ ಹೆಚ್ಚು. ಅದಕ್ಕೆ ಕಾರಣವೂ ಇದೆ.

ರೋಹಿಣಿ ಸಿಂಧೂರಿ ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಓ ಆಗಿದ್ದ ಸಮಯದಲ್ಲಿ ನಾನವರನ್ನು ಭೇಟಿ ಮಾಡಿದ್ದೆ. ನಾನಾಗ ಮೈಸೂರಿನ ನಜೀರ್ ಸಾಬ್ ಸಂಸ್ಥೆಯಲ್ಲಿ ತರಬೇತಿ ಸಲಹೆಗಾರನಾಗಿದ್ದೆ. ಸಂಸ್ಥೆಯ ನಿರ್ದೇಶಕರಾಗಿದ್ದ ಪಿ.ಶಿವಶಂಕರ್ ನನ್ನನ್ನು ಕರೆದು ರೋಹಿಣಿ ಸಿಂಧೂರಿ ಅವರನ್ನು ಭೇಟಿ ಮಾಡುವಂತೆ ಸೂಚಿಸಿದ್ದರು. ” ಫೋನ್ ಮಾಡಿ ನನ್ನ ತಲೆ ತಿನ್ತಾ ಇದ್ದಾರೆ ವಿಲ್ಫ್ರೆಡ್. ಅವರಿಗೆ ಸಂಪೂರ್ಣ ಸ್ವಚ್ಚತಾ ಆಂದೋಲನವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಟಾನ ಮಾಡೋದಕ್ಕೆ ಐಡಿಯಾ ಕೊಡ್ಬೇಕಂತೆ. ನೀವೇ ಸರಿ. ಹೋಗ್ತೀರಾ..?” ಎಂದು ಕೇಳಿದ್ದರು. ನಾನು ಸರಿ ಎಂದು ಮಂಡ್ಯ ಜಿ.ಪಂ ಗೆ ಹೋಗಿ ರೋಹಿಣಿ ಅವರನ್ನು ಭೇಟಿ ಮಾಡಿದ್ದೆ. ಈ ಭೇಟಿ, ಚರ್ಚೆ ಮೂರು ಬಾರಿ ನಡೆದಿತ್ತು. ಕಾರ್ಯಕ್ರಮದ ಬಗ್ಗೆ ಚರ್ಚಿಸಿ ಸಲಹೆಗಳನ್ನು ನೀಡಿದ್ದೆ. ತುಂಬ ಖುಷಿ ಪಟ್ಟಿದ್ದರು. ಮುಂದೆ ಸಂಪೂರ್ಣ ಸ್ವಚ್ಚತಾ ಆಂದೋಲನ ವಿಶಿಷ್ಟ ಅನುಷ್ಠಾನಕ್ಕಾಗಿ ಮಂಡ್ಯ ಜಿಲ್ಲಾ ಪಂಚಾಯಿತಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿತ್ತು..!!

ನಮ್ಮ ಭೇಟಿಯ ಸಂದರ್ಭದಲ್ಲಿ ನಾನು ರೋಹಿಣಿಯವರಲ್ಲಿ ಒಂದು ನಕಾರಾತ್ಮಕ (Negative) ನಡವಳಿಕೆಯನ್ನು ಗಮನಿಸಿದ್ದೆ. ಚುನಾಯಿತ ಪ್ರತಿನಿಧಿಗಳನ್ನು ದೂರ ಇಟ್ಟು ತಾವೇ ನಾಯಕತ್ವ ವಹಿಸುವ ಅವರ ತರಾತುರಿ ನನಗೆ ಇಷ್ಟ ಆಗಿರಲಿಲ್ಲ. ಸೂಚ್ಯವಾಗಿ ಅವರಿಗೆ ಅದನ್ನು ತಿಳಿಸಿದ್ದೆ ಕೂಡ. ಮುಂದೆ ಜಿ.ಪಂ ಆಡಳಿತ ಮಂಡಳಿಯು ಜೊತೆಗಿನ ಸಂಘರ್ಷವೇ ಅವರಿಗೆ ಸಮಸ್ಯೆ ಆಗಿತ್ತು. ಬೇರೆ ಜಿಲ್ಲೆಗಳಿಗೆ ಮತ್ತು ಹುದ್ದೆಗಳಿಗೆ ವರ್ಗಾವಣೆ ಆಗಿ ಹೋದಾಗಲೂ ಅವರ ಈ ನಡವಳಿಕೆಯೇ ರೋಹಿಣಿ ಸಿಂಧೂರಿ ಅವರಿಗೆ ಸಮಸ್ಯೆ ಸೃಷ್ಟಿಸುತ್ತಾ ಬಂದಿದೆ. “ನಾನು ಮಾತ್ರ ಸರಿ.., ನಮ್ಮ ಸುತ್ತ ಇರುವವರೆಲ್ಲ ಕೆಟ್ಡವರು” ಎನ್ನುವ ಮನೋಭಾವ ಕ್ರಿಯಾಶೀಲತೆ, ಉತ್ಸಾಹ ಇರುವ ಅನೇಕ ಅಧಿಕಾರಿಗಳಿಗೆ ಕಂಟಕವಾಗಿ ಕಾಡುತ್ತಿದೆ. ಇದಕ್ಕೆ ಉದಾಹರಣೆ ರೋಹಿಣಿ ಸಿಂಧೂರಿ. ‌ಇನ್ನೊಬ್ಬ ಹಿರಿಯ ಐಎಎಸ್ ಅಧಿಕಾರಿ ವಿ.ರಷ್ಮಿ ಕೂಡ ಇಂತಹ ಅತಿರೇಕಕ್ಕೆ ದೊಡ್ಡ ಸಾಕ್ಷಿಯಾಗಿದ್ದಾರೆ.

ರಷ್ಮಿ ಅವರು ಆಡಳಿತ ತರಬೇತಿ ಸಂಸ್ಥೆಯ ಮಹಾ ನಿರ್ದೇಶಕಿಯಾಗಿ ಸೃಷ್ಡಿಸಿದ ಅವಾಂತರ, ಅಮಾಯಕ ಸಿಬ್ಬಂದಿಯ ಸಾವು ನೋಡಿ ನೊಂದವನು ನಾನು. ಮನಸ್ಸು ತಡೆಯದೆ ರಷ್ಮಿ ಅವರಿಗೆ ನೇರವಾಗಿ ನನ್ನ ಅಭಿಪ್ರಾಯವನ್ನು ಹೇಳಿದ್ದೆ. ಈ ಕಾರಣಕ್ಕಾಗಿಯೇ ನಾನು ನಜೀರ್ ಸಾಬ್ ಸಂಸ್ಥೆಯ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುವ ಸ್ಥಿತಿ ನಿರ್ಮಾಣವಾಯಿತು.
ಇನ್ನು ಶಿಲ್ಪಾ ನಾಗ್ ನಾನು ಕಂಡಂತಹ ಉತ್ತಮ‌ ಅಧಿಕಾರಿ. ಬೇರೆಯವರ ಮಾತುಗಳನ್ನು ಆಲಿಸುವ, ಅಭಿಪ್ರಾಯವನ್ನು ಗೌರವಿಸುವ ಅವರ ಗುಣ ನೋಡಿ ಅನಿತಾ ಕೌಲ್ ಮೇಡಂ ನೆನಪಿಗೆ ಬರುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಗೆಳೆಯರು ಗುಂಡ್ಲು ಪೇಟೆಯಲ್ಲಿ ದಿ. ಅಬ್ದುಲ್ ನಜೀರ್ ಸಾಬ್ ಅವರ ಜಯಂತಿ ಕಾರ್ಯಕ್ರಮ ಏರ್ಪಡಿಸಿದ್ದರು.

ನಾನು, ಘೋರ್ಪಡೆಯವರು ಮತ್ತು ಕಾಡಶೆಟ್ಟಿಹಳ್ಳಿ ಸತೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದೆವು. ಅಲ್ಲಿನ ಕಾರ್ಯಕ್ರಮ ಮುಗಿಸಿ ವಾಪಸಾಗುವ ದಾರುಯಲ್ಲಿ ನಜೀರ್ ಸಾಬ್ ಸಂಸ್ಥೆಗೆ ಭೇಟಿ ನೀಡಿದ್ದೆ. ಶಿಲ್ಪಾ ನಾಗ್ ಆಗ ಸಂಸ್ಥೆಯ ನಿರ್ದೇಶಕಿ ಆಗಿದ್ದರು.‌ ನಮ್ಮ ಜೊತೆ ತುಂಬ ಹೊತ್ತು ಚರ್ಚಿಸಿದರು. ನಮ್ಮ ಮಾತುಕತೆ ನೆಡಯುವ ಹೊತ್ತಿನಲ್ಲಿ ಕಚೇರಿಯಲ್ಲೂ ನಜೀರ್ ಸಾಬ್ ಜಯಂತಿ ಆಚರಣೆಗೆ ಸಿದ್ಧತೆ ನಡೆದಿತ್ತು. ಶಿಲ್ಪಾ ನಾಗ್ ಅವರ ಒತ್ತಾಯಕ್ಕೆ ಮಣಿದು ನಾನೇ ನಜೀರ್ ಸಾಬ್ ಅವರಿಗೆ ನುಡಿ ನಮನ ಸಲ್ಲಿಸಿದೆ. ಈ ಸಂದರ್ಭದಲ್ಲಿ ಮಾತನಾಡುತ್ತಾ, ನಜೀರ್ ಸಾಬ್ ಸಂಸ್ಥೆಯ ಗತ ವೈಭವವನ್ನು ಮರು ಸ್ಥಾಪಿಸುವಂತೆ ಅವರನ್ನು ಕೋರಿದ್ದೆ. ಶಿಲ್ಪಾ ನಾಗ್ ಅವರಿಗೆ ನಾನು ಮರಳಿ ನಜೀರ್ ಸಾಬ್ ಸಂಸ್ಥೆಗೆ ಬರಬೇಕು ಎನ್ನುವ ಆಸಕ್ತಿ ಇತ್ತು. ಬೇರೆ ಬೇರೆ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಆದರೆ ಅವರು ಆಡಳಿತಾವಧಿಯಲ್ಲಿ ಸಂಸ್ಥೆ ಮತ್ತು ಸಂಸ್ಥೆಯನ್ನು ನಂಬಿದ ಜೀವಗಳಿಗೆ ಒಳಿತನ್ನು ಮಾಡಲು ಸಾಕಷ್ಟು ಪ್ರಯತ್ನ ಮಾಡಿದರು. ನಾನು ನೋಡಿದಂತೆ ಶಿಲ್ಪಾ ನಾಗ್ ಮಾನವೀಯ ಅಂತಃಕರಣ ಹಿಂದಿದ ಅತ್ಯುತ್ತಮ ಅಧಿಕಾರಿ.‌ತನ್ನ ಜೊತೆ ಇತರರನ್ನೂ ಕರದೊಯ್ಯುವ, ಬೆಳೆಸುವ ಅವರ ಗುಣವೇ ಅವರ ಶಕ್ತಿ. ಈ ಗುಣ ಇಂದಿನ ಅಧಿಕಾರಶಾಹಿಯಲ್ಲಿ ತುಂಬಾ ಕೊರತೆ ಇದೆ.

ರೋಹಿಣಿ ಸಿಂಧೂರಿ ತನ್ನ ಮನೋಭಾವ ಮತ್ತು ಕೆಲಸ ವಿಧಾನದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ ಜನಪರವಾಗಿ ಕೆಲಸ ಮಾಡುವ ಅಗಾಧ ಸಾಮರ್ಥ್ಯ ಹೊಂದಿರುವವರು. ರಾಜ್ಯದ ಮುಖ್ಯ ಕಾರ್ಯದರ್ಶಿ ಆಗಿರುವ ರವಿಕುಮಾರ್ ಅವರು ನಾನು ನೋಡಿದ ದಕ್ಷ ಅಧಿಕಾರಿಗಳಲ್ಲಿ ಒಬ್ಬರು. ಈ ಇಬ್ಬರು ಯುವ ಅಧಿಕಾರಿಗಳನ್ನು ತಮ್ಮ ಮುಂದೆ ಕೂರಿಸಿ ಬುದ್ಧಿ ಹೇಳಬೇಕು. ಅಗತ್ಯ ಬಂದರೆ ಕಿವಿ ಹಿಂಡಿ ಪಾಠ ಹೇಳಬೇಕು.

× Chat with us