ದಾವಣಗೆರೆ: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತು ಇತರೆ ಸೌಲಭ್ಯಗಳ ವಿಸ್ತರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಏಳನೇ ವೇತನ ಆಯೋಗವನ್ನು (seventh pay commission) ರಚಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಇಲ್ಲಿ ತಿಳಿಸಿದ್ದಾರೆ.
ಪ್ರಸಕ್ತ ವರ್ಷದ ಅಕ್ಟೋಬರ್ ಅಂತ್ಯದ ಒಳಗೆ ವೇತನ ಆಯೋಗ ರಚನೆ ಮಾಡುವುದಾಗಿ ಈ ಹಿಂದೆ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಭಾನುವಾರ ಭೇಟಿ ಮಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ನಿಯೋಗ ಜತೆ ಬೊಮ್ಮಾಯಿ ಅವರು ಮಾತುಕತೆ ನಡೆಸಿದ್ದರು. ತ್ವರಿತವಾಗಿ ಮಧ್ಯಂತರ ವರದಿ ನೀಡಲು ಸೂಚಿಸಲಾಗುವುದು. 2023ರ ಮಾರ್ಚ್ ಒಳಗೆ ಆಯೋಗದ ಶಿಫಾರಸುಗಳನ್ನು ಜಾರಿ ಮಾಡ ಲಾ ಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು.
ಈಗ ಆಯೋಗ ರಚನೆ ಸಂಬಂಧ ಅಧಿಕೃತ ಸೂಚನೆ ನೀಡಿದ್ದಾರೆ.
ಐದು ವರ್ಷಗಳಿಗೆ ಒಮ್ಮೆ ವೇತನ ಆಯೋಗ ರಚನೆ ಮಾಡಲಾಗುತ್ತಿತ್ತು. ಚುನಾವಣೆ ನೀತಿ ಸಂಹಿತೆ ಘೋಷಣೆಗೂ ಮೊದಲೇ ನೌಕರರಿಗೆ ಮೂಲ ವೇತನದಲ್ಲಿ ಗಣನೀಯ ಹೆಚ್ಚಳವಾಗಲಿದೆ. ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ರಾಜ್ಯ ಎಲ್ಲ ನೌಕರರ ಪರವಾಗಿ ನ.10 ರಂದು ರೇಸ್ಕೋರ್ಸ್ ರಸ್ತೆಯ ಅವರ ನಿವಾಸದಲ್ಲಿ ಸನ್ಮಾನಿಸಲಾಗುವುದು ಎಂದು ಷಡಕ್ಷರಿ ಅವರು ಮಾಹಿತಿ ನೀಡಿದ್ದಾರೆ.
ನೂತನ ವೇತನ ಆಯೋಗದ ಶಿಫಾರಸಿನಿಂದ ರಾಜ್ಯದಲ್ಲಿ ಸುಮಾರು 13.5 ಲಕ್ಷ ಮಂದಿಗೆ ಅನುಕೂಲವಾಗಲಿದೆ. 6 ಲಕ್ಷ ಸರ್ಕಾರಿ ನೌಕರರು (government employees), ನಿಗಮ-ಮಂಡಳಿ, ಪ್ರಾಧಿಕಾರಿಗಳ 3 ಲಕ್ಷ ಮತ್ತು ಪಿಂಚಣಿ ಪಡೆಯುತ್ತಿರುವ 4.5 ಲಕ್ಷ ನಿವೃತ್ತರಿಗೆ 7ನೇ ವೇತನ ಆಯೋಗ ಅನ್ವಯವಾಗಲಿದ್ದು, ವರ್ಷಕ್ಕೆ ಸರ್ಕಾರವು ಹೆಚ್ಚುವರಿಯಾಗಿ ಸುಮಾರು 12,500 ಕೋಟಿ ರೂ. ವೆಚ್ಚ ಮಾಡಬೇಕಾದ ನಿರೀಕ್ಷೆ ಇದೆ. ಐದು ವರ್ಷದೊಳಗೇ ಮತ್ತೊಂದು ವೇತನ ಆಯೋಗ ರಚನೆಯಾಗುತ್ತಿರುವುದು ಇದೇ ಇದೇ ಮೊದಲು. ಆಯೋಗದಿಂದ ಶೇ.40ರಷ್ಟು ವೇತನ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ
2022ರ ಜುಲೈ ಒಂದರಿಂದ ಅನ್ವಯವಾಗುವಂತೆ ಕಾಲ್ಪನಿಕ ಸೌಲಭ್ಯ, 2023ರ ಜನವರಿ ಒಂದರಿಂದ ಅನ್ವಯವಾಗುವಂತೆ ಆರ್ಥಿಕವಾಗಿ ಸೌಲಭ್ಯ ನೀಡಬೇಕು, ಶೇ.40ರಷ್ಟುವೇತನ ಹೆಚ್ಚಳ ಮಾಡಬೇಕು ಎಂದು ಸರ್ಕಾರಿ ನೌಕರರು ಬೇಡಿಕೆ ಮಂಡಿಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿಯಲ್ಲಿ ಮಂಡಿಸಲಿರುವ ಬಜೆಟ್ ನಲ್ಲಿ 7ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನಕ್ಕಾಗಿ ಹಣ ಮೀಸಲಿಡುವ ಸಾಧ್ಯತೆ ಇದೆ.