ಮೈ.ಶುಗರ್ ಖಾಸಗೀಕರಣ ಕೈಬಿಟ್ಟ ರಾಜ್ಯ ಸರ್ಕಾರ

ಬೆಂಗಳೂರು : ಸದ್ಯಕ್ಕೆ ಮೈ ಶುಗರ್ ಕಾರ್ಖಾನೆ ಖಾಸಗೀಕರಣ ಪ್ರಸ್ತಾಪವನ್ನು ಕೈ ಬಿಡಲಾಗಿದೆ. ಕಾರ್ಖಾನೆಯ ಪುನಶ್ಚೇತನಕ್ಕೆ ತಕ್ಷಣವೇ ತಜ್ಞರ ಸಮಿತಿ ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಸಭೆಯಲ್ಲಿ ಮೈ ಶುಗರ್ ಕಾರ್ಖಾನೆ ಬಗ್ಗೆ ಚರ್ಚೆ ಮಾಡಲಾಗಿದೆ. ಮೂರು ತಿಂಗಳಲ್ಲಿ ಮೈ ಶುಗರ್ ಪುನಶ್ಚೇತನಗೊಳಿಸಲು ಕ್ರಮವಹಿಸುವಂತೆ ಸೂಚಿಸಲಾಗಿದೆ.

ಕಾರ್ಖಾನೆಯನ್ನು ಗುತ್ತಿಗೆ ನೀಡುವ ಸಂಬಂಧ ಈ ಮುಂಚೆ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ಸದ್ಯಕ್ಕೆ ವಾಪಸ್​ ಪಡೆಯಲಾಗುತ್ತದೆ. ಎರಡು ವರ್ಷ ಸರ್ಕಾರದ ಸುಪರ್ದಿಯಲ್ಲೇ ಕಾರ್ಖಾನೆ ಪುನಶ್ಚೇತನಗೊಳಿಸಲು ಸಭೆಯಲ್ಲಿ ಚರ್ಚೆ ನಡೆದಿದೆ. ಪುನಶ್ಚೇತನ ಸಂಬಂಧ ತಜ್ಞರ ಸಮಿತಿ ನೇಮಕ ಮಾಡಲಾಗುವುದು. ಮೂರು ತಿಂಗಳಲ್ಲಿ ಸಮಿತಿ ವರದಿ ನೀಡಲಿದೆ ಎಂದು ತಿಳಿಸಿದರು.
ಮುಂದಿನ ವರ್ಷದಿಂದ (ಮುಂದಿನ ಹಂಗಾಮು) ಕಬ್ಬು ನುರಿಸಲು ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ. ತಕ್ಷಣ ಮೈ ಶುಗರ್ ಕಾರ್ಖಾನೆಗೆ ವ್ಯವಸ್ಥಾಪಕ ನಿರ್ದೇಶಕರ ನೇಮಕ, ಅಗತ್ಯ ಹಣ ಬಿಡುಗಡೆ ಹಾಗೂ ಬೇಕಾದ ಎಲ್ಲಾ ಯಂತ್ರೋಪಕರಣ ರಿಪೇರಿಗೆ ಹಣ ಬಿಡುಗಡೆ ಮಾಡಲಾಗುತ್ತದೆ ಎಂದರು.

ಕಬ್ಬಿನ ಉಪ ಉತ್ಪನ್ನಗಳನ್ನು ತಯಾರಿಸಲು ಆದ್ಯತೆ‌ ನೀಡಲಾಗುತ್ತದೆ. ಕೂಡಲೇ ದಕ್ಷ ಅಧಿಕಾರಿಯನ್ನು ಎಂಡಿಯಾಗಿ ನೇಮಕ ಮಾಡಲು ತೀರ್ಮಾನ ಕೈಗೊಳ್ಳಲಾಗುವುದು. ಅಗತ್ಯ ಮಷಿನರಿ ಸರಿಪಡಿಸಲು ಈಗಿನಿಂದಲೇ ಕ್ರಮ ಕೈಗೊಳ್ಳಲಾಗುವುದು. ಖಾಸಗೀಕರಣ ಮಾಡುವ ಪ್ರಸ್ತಾಪ ಸದ್ಯಕ್ಕೆ ವಾಪಸ್​ ಪಡೆಯುತ್ತೇವೆ.

ಅಗತ್ಯ ಹಣಕಾಸು ನೆರವು ನೀಡಲಾಗುವುದು. ತಜ್ಞರ ಸಮಿತಿ ನೀಡುವ ವರದಿ ಆಧಾರದ ಮೇಲೆ ಮುಂದಿನ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸ್ಪಷ್ಟ ಪಡಿಸಿದರು‌.

‘ಇವತ್ತಿನ ಸಭೆಯಲ್ಲಿ ಹಲವಾರು ವಿಷಯ ಚರ್ಚೆ ಮಾಡಿದ್ದೇವೆ. ಸಕಾರಾತ್ಮಕ ಚರ್ಚೆಯಾಗಿದೆ. ರೈತರ ಸಮಸ್ಯೆ ಪರಿಹಾರ ಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವು. ಯಾವ ಮಾದರಿಯಲ್ಲಾದರೂ ಕಾರ್ಖಾನೆ ಆರಂಭಿಸಬೇಕುವೆಂದು ಮನವಿ ಮಾಡಿದ್ದೇವೆ’.
– ಸುಮಲತಾ ಅಂಬರೀಶ್, ಸಂಸದೆ

‘ಸರ್ಕಾರ ಉತ್ತಮ ನಿರ್ಧಾರ ಮಾಡಿದೆ. ಮುಖ್ಯಮಂತ್ರಿಗಳ ತೀರ್ಮಾನ ಸ್ವಾಗತಿಸಿದ್ಸೇವೆ. ರೈತರ ಪರವಾದ ತೀರ್ಮಾನವಾಗಿದೆ. ಖಾಸಗಿ ಕರಣ ಮಾಡುವುದನ್ನು ಮರು ಪರಿಶೀಲನೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ’.
– ಬಡಗಲಪುರ ನಾಗೇಂದ್ರ ರೈತ ಮುಖಂಡ

‘ಮೈಶುಗರ್ ಕಾರ್ಖಾನೆ ಸರ್ಕಾರವೇ ನಡೆಸಬೇಕೆಂಬ ನಮ್ಮ ಹೋರಾಟಕ್ಕೆ ಸಿಎಂ ಸ್ಪಂದಿಸಿ ನಮಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅವರಿಗೆ ಮಂಡ್ಯ ಜಿಲ್ಲೆಯ ರೈತರ ಪರವಾಗಿ ಅಭಿನಂದನೆ. ನಾನು ಇದಕ್ಕಾಗಿ ಒಂದು ದಿನ ಪಾದಯಾತ್ರೆ ಮಾಡಿದ್ದೆ. ಅದಕ್ಕೆ ಮನ್ನಣೆ ನೀಡಿದ್ದಾರೆ. ಅವರಿಗೆ ಹೃದಯಪೂರ್ವಕ ಧನ್ಯವಾದಗಳು’.
– ಅನ್ನದಾನಿ, ಮಳವಳ್ಳಿ ಶಾಸಕ

‘ಹಿಂದಿನ ಸಂಪುಟ ಮೈಶುಗರ್ ಕಾರ್ಖಾನೆಯನ್ನು ಖಾಸಗಿ ಕರಣ ಮಾಡುವುದಾಗಿ.ತೀರ್ಮಾನ ಮಾಡಿದ್ದರು. ಅದರ ವಿರುದ್ಧ ಹೋರಾಟ ಮಾಡಿದ್ದೇವು. ಸಿಎಂ ನಮ್ಮ ಪರವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ಮೂರು ತಿಂಗಳಲ್ಲಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’.
– ಕೆ.ಟಿ. ಶ್ರೀಕಂಠೆಗೌಡ, ಎಂಎಲ್‌ಸಿ

× Chat with us