ವಿಜಯನಗರ ಬಡಾವಣೆ ಶೀಘ್ರ ಪಾಲಿಕೆ ವ್ಯಾಪ್ತಿಗೆ: ಎಸ್. ಟಿ. ಸೋಮಶೇಖರ್

ಮೈಸೂರು: ದಶಕಗಳ ಹಿಂದೆ ರಚನೆಯಾದರೂ ಮೂಲಸೌಕರ್ಯವಿರದೆ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಖುದ್ದಾಗಿ ಅರಿಯಲು ಮಂಗಳವಾರ ನಗರ ಪ್ರದಕ್ಷಿಣೆ ಹಾಕಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮುಡಾ ನಿರ್ಮಿಸಿರುವ ಬಡಾವಣೆಗಳಲ್ಲಿ ಅಗತ್ಯ ಸೌಲಭ್ಯ ಒದಗಿಸಲು ಆರ್ಥಿಕ ನೆರವು ಕಲ್ಪಿಸುವ ಅಭಯ ನೀಡಿದರು.

ಆರೇಳು ಬಡಾವಣೆಗಳಲ್ಲೂ ಪ್ರತ್ಯೇಕವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಂಚರಿಸಿ ಕೆಲಹೊತ್ತು ಕಳೆದ ಸಚಿವರು, ಅಲ್ಲಿನ ಸಮಸ್ಯೆಗಳು, ಜನರ ಬೇಡಿಕೆಗೆ ಅನುಗುಣವಾಗಿ ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿ ಪರಿಹಾರ ನೀಡುವ ಭರವಸೆ ಕೊಟ್ಟರು.

ವಿಜಯನಗರ ಬಡಾವಣೆಯನ್ನು ಕಾರ್ಪೋರೇಶನ್ ಗೆ ಸೇರಿಸಬೇಕು ಎಂಬ ವಿಷಯದ ಬಗ್ಗೆ ಈಗಾಗಲೇ ಸಭೆಗಳನ್ನು ನಡೆಸಲಾಗಿದೆ. ಒಟ್ಟಾರೆಯಾಗಿ ಮೈಸೂರಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಮೈಸೂರಿನ ವಿಜಯನಗರ ನಾಲ್ಕನೇ ಹಂತ, ಆರ್.ಟಿ.ನಗರ, ಶಾಂತವೇರಿ ಗೋಪಾಲಗೌಡನಗರ, ಲಾಲ್ ಬಹದ್ದೂರ್‌ಶಾಸ್ತ್ರೀನಗರ, ಸರ್ದಾರ್ ವಲ್ಲಭಭಾಯ್ ಪಟೇಲ್‌ನಗರಕ್ಕೆ ಖುದ್ದು ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಸ್ಥಳೀಯ ನಾಗರಿಕರೊಂದಿಗೆ ಸಂವಾದ ನಡೆಸಿದರು.

ಸಮಸ್ಯೆಗಳ ಸಾಲುಸಾಲು: ಮೈಸೂರಿನಲ್ಲೇ ಅತಿ ದೊಡ್ಡ ಬಡಾವಣೆಯಾಗಿರುವ ವಿಜಯನಗರ ನಾಲ್ಕನೇ ಹಂತದಲ್ಲಿ ಉಂಟಾಗಿರುವ ಕುಡಿಯುವ ನೀರು, ಒಳಚರಂಡಿ, ಬೀದಿದೀಪ, ರಸ್ತೆಗಳ ಅಭಿವೃದ್ಧಿಪಡಿಸುವ ಕುರಿತಂತೆ ಇರುವ ಸಮಸ್ಯೆಗಳನ್ನು ನಿವಾಸಿಗಳನ್ನು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರು ಸಚಿವರ ಎದುರು ಸವಿಸ್ತಾರವಾಗಿ ಬಿಡಿಸಿಟ್ಟು ಸಾಧ್ಯವಾದಷ್ಟು ಬೇಗನೆ ಪರಿಹರಿಸಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದ್ದನ್ನು ಸಚಿವ ಎಸ್.ಟಿ.ಸೋಮಶೇಖರ್ ಪರಿಗಣಿಸಿದರು.

ಅಧಿಕಾರಿಗೆ ಸ್ಥಳದಿಂದಲೇ ಕರೆ: ಆರ್.ಟಿ.ನಗರಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಪರವಾಗಿ ಒಬ್ಬರಿಂದ ಸಮಸ್ಯೆಗಳನ್ನು ಕೇಳಿಕೊಂಡರು. 2016 ರಲ್ಲಿ ನಿವೇಶನ ಹಂಚಿಕೆಯಾಗಿದ್ದರೂ ಈತನಕ ವಿದ್ಯುತ್ ಸಂಪರ್ಕ ಕಲ್ಪಿಸದೆ ಇರುವುದರಿಂದ ನಾವೇ ಮುಖ್ಯ ಲೈನ್‌ನಿಂದ ದೂರದೂರದ ಮನೆಗಳಿಗೆ ಸಂಪರ್ಕ ಪಡೆದಿರುವುದರಿಂದ ತಿಂಗಳಿಗೆ 2 ಸಾವಿರ ರೂ. ಬಿಲ್ ಕಟ್ಟಬೇಕಾಗಿದೆ. ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದು ಮುಂದಿಟ್ಟ ಬೇಡಿಕೆಗೆ ತಕ್ಷಣವೇ ಸ್ಪಂದಿಸಿದ ಸಚಿವರು, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರೊಡನೆ ಅಲ್ಲಿಂದಲೇ ದೂರವಾಣಿ ಮೂಲಕ ಮಾತನಾಡಿ ಒಂದು ವಾರದೊಳಗೆ ಸಂಪರ್ಕ ಕಲ್ಪಿಸಲು ಸೂಚನೆ ನೀಡಿದರು.

ಇದಾದ ಬಳಿಕ ಶಾಂತವೇರಿಗೋಪಾಲಗೌಡ ನಗರಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮನವಿ ಸ್ವೀಕರಿಸಿದರು. ಕಳೆದ ಮೂರು ವರ್ಷಗಳಿಂದ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗದೆ ಪರದಾಡುತ್ತಿರುವುದು, ಯುಜಿಡಿ ಲೈನ್ ಇಲ್ಲದೆ ಪರಿತಪಿಸುತ್ತಿರುವ ಕುರಿತು ಇಲ್ಲಿನ ನಿವಾಸಿಗಳು ಸಚಿವರ ಗಮನಕ್ಕೆ ತಂದರು. ಇಲ್ಲಿಯೂ ಒಬ್ಬೊಬ್ಬರಿಂದಲೇ ಸಮಸ್ಯೆಗಳನ್ನು ಕೇಳಿ ಪಟ್ಟಿ ಮಾಡಿಕೊಂಡರಲ್ಲದೆ, ಶೀಘ್ರದಲ್ಲೇ ಇದೆಲ್ಲದಕ್ಕೂ ಕ್ರಮಕೈಗೊಂಡು ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ನುಡಿದರು.

ವಿಜಯನಗರ ಸಮಸ್ಯೆಗೆ ಮುಕ್ತಿ: ಇದಕ್ಕೂ ಮೊದಲು ವಿಜಯನಗರ ನಾಲ್ಕನೇ ಹಂತದಲ್ಲಿ ನಿರ್ಮಿಸಿರುವ ೧೩ ಎಂ.ಎಲ್. ಸಾಮರ್ಥ್ಯದ ಜಲ ಸಂಗ್ರಹಾಗಾರ ಹಾಗೂ ೧೦ ಲಕ್ಷ ಲೀಟರ್ ಸಾಮರ್ಥ್ಯಕ್ಕೂ ಮೇಲ್ಮಟ್ಟದ ಟ್ಯಾಂಕ್‌ನ್ನು ವೀಕ್ಷಿಸಿ ಮಾಹಿತಿ ಪಡೆದರು. ಒಂದು ತಿಂಗಳೊಳಗೆ ಪಂಪುಗಳನ್ನು ತಳಮಟ್ಟಕ್ಕೆ ಸ್ಥಳಾಂತರಿಸಿ ನೀರು ಕೊಡಲು ಸಜ್ಜಾಗಬೇಕು. ಈ ವಿಚಾರದಲ್ಲಿ ತಡ ಮಾಡಿದರೆ ಸುಮ್ಮನಿರಲ್ಲ ಎಂದು ಸಂಬಂಧಿಸಿದ ಜಲಮಂಡಳಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಆಯುಕ್ತ ಡಾ.ಡಿ.ಬಿ.ನಟೇಶ್, ನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಅಧೀಕ್ಷಕ ಅಭಿಯಂತರ ಶಂಕರ್, ಕಾರ್ಯದರ್ಶಿ ಎಂ.ಕೆ.ಸವಿತ ಮೊದಲಾದವರು ಹಾಜರಿದ್ದರು.

× Chat with us