ಗುಬ್ಬಿಯಲ್ಲಿ ಜೆಡಿಎಸ್‌ ಸಮಾವೇಶ, ಶಾಸಕ ಶ್ರೀನಿವಾಸ್‌ ಆಕ್ರೋಶ

ತುಮಕೂರು: ಗುಬ್ಬಿಯಲ್ಲಿ ಜೆಡಿಎಸ್‌ ಸಮಾವೇಶ ಹಮ್ಮಿಕೊಂಡಿರುವುದಕ್ಕೆ, ಶಾಸಕ ಶ್ರೀನಿವಾಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಾವೇಶದಿಂದ ನಮ್ಮನ್ನು ದೂರ ಇಟ್ಟು ಅವಮಾನ ಮಾಡಿದ್ದಾರೆ, ಜೆಡಿಎಸ್‌ ಗುಬ್ಬಿ ಘಟಕದ ಯಾರೊಬ್ಬರೂ ಸಮಾವೇಶಕ್ಕೆ ಹೋಗಲ್ಲ. ತಾಲೂಕಿನ ಜೆಡಿಎಸ್‌ ಮುಖಂಡರು ಸಮಾವೇಶಕ್ಕೆ ಬಹಿಷ್ಕಾರ ಹಾಕಿದ್ದಾರೆ ಎಂದು ಶ್ರೀನಿವಾಸ್‌ ಹೇಳಿಕೆ ನೀಡಿದ್ದಾರೆ.

ನಿಖಿಲ್‌ ಕುಮಾರಸ್ವಾಮಿ ಪತ್ನಿಯ ಸೀಮಂತಕ್ಕೆ ಹೋದಾಗ ಕುಮಾರಸ್ವಾಮಿಯವರು ನಮ್ಮೊಂದಿಗೆ ಮಾತನಾಡದೆ ಅವಮಾನ ಮಾಡಿದ್ದಾರೆ. ನಾನು ದೇವೇಗೌಡರು ಮತ್ತು ಚೆನ್ನಮ್ಮರ ಪಕ್ಕದಲ್ಲಿ ಕೂತಿದ್ದೆ, ಕುಮಾರಸ್ವಾಮಿಯವರು ನನ್ನ ಪಕ್ಕದಲ್ಲೇ ಕೂತಿದ್ದರು. ಆದರೂ ನನ್ನನ್ನು ಮಾತನಾಡಿಸದಿರುವುದು ಬೇಸರವಾಗಿದೆ ಎಂದು ಹೇಳಿದರು.

ಹಿಂದೂ ಸಂಸ್ಕೃತಿಯಲ್ಲಿ ತಮಗೆ ಆಗದವರು ಮನೆಗೆ ಬಂದರೂ ಮಾತನಾಡಿಸುತ್ತಾರೆ. ಕುಮಾರಸ್ವಾಮಿಯವರು ನನ್ನನ್ನು ಮಾತನಾಡಿಸಲಿಲ್ಲ. ರೇವಣ್ಣನವರು ನನ್ನನ್ನು ಊಟಕ್ಕೆ ಕರೆದರು. ಸಾ.ರಾ.ಮಹೇಶ್‌, ಕುಮಾರಸ್ವಾಮಿ ರಟ್ಟೆ ಹಿಡಿದು, ʼವಾಸು ಬಂದಿದ್ದಾರೆ, ಮಾತನಾಡಿಸುʼ ಅಂದಾಗಲೂ ಕುಮಾರಸ್ವಾಮಿ ಮಾತನಾಡಿಸಲಿಲ್ಲ ಎಂದು ಹೇಳಿದರು.

ಮೊನ್ನೆ ಬಿಡದಿ ಕಾರ್ಯಗಾರಕ್ಕೆ ಹೋದೆ. ದೇವೇಗೌಡರು ಎದ್ದು ನಿಂತು ಮಾತನಾಡಿಸಿದರು. ಕುಮಾರಸ್ವಾಮಿಯವರಿಗೆ ನಮಸ್ಕಾರ ಎಂದರೂ ಮಾತನಾಡಲಿಲ್ಲ. ನನಗೆ ಕುಮಾರಸ್ವಾಮಿ ಫೋನ್‌ ಮಾಡಿದ್ದಾರೆ ಎನ್ನುವುದು ಸುಳ್ಳು. ಹಾಗಾದರೆ ಕಾರ್ಯಗಾರದಲ್ಲಿ ಕುಳಿತು ಹತ್ತು ನಿಮಿಷ ಮಾತನಾಡಬಹುದಿತ್ತಲ್ಲ? ನನಗೆ ಇಷ್ಟೆಲ್ಲಾ ಅವಮಾನ ಯಾಕೆ ಮಾಡುತ್ತಿದ್ದಾರೆ ಗೊತ್ತಿಲ್ಲ. ನಾನು ಪಕ್ಷ ಬಿಡುತ್ತೇನೆಂದು ಎಲ್ಲೂ ಹೇಳಿಲ್ಲ, ಇವರೇ ಕಲ್ಪನೆ ಮಾಡಿಕೊಂಡು ಹೇಳುತ್ತಾರೆ ಎಂದು ಹೇಳಿದರು.

× Chat with us