ಅನಾಥಾಶ್ರಮದಲ್ಲಿ ಸಾಕುತ್ತೇವೆಂದು ಮಕ್ಕಳನ್ನು ಪಡೆದು ಮಾರುತ್ತಿದ್ದ ಮಹಿಳೆಯರು ಅರೆಸ್ಟ್‌: ಎಸ್‌ಪಿ ಮಾಹಿತಿ

ಮೈಸೂರು: ನಂಜನಗೂಡು ಮಕ್ಕಳ ಕಳ್ಳ ಸಾಗಣೆ ಹಾಗೂ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟೂ ಹೆಚ್ಚಿನ ಮಾಹಿತಿ ಪೊಲೀಸರಿಗೆ ಲಭ್ಯವಾಗುತ್ತಿದೆ. ಒಂದು ಪ್ರಕರಣದ ತನಿಖೆಗೆ ಇಳಿದ ಪೊಲೀಸರಿಗೆ ಮತ್ತೊಂದು ಪ್ರಕರಣದ ಜಾಡು ಸಿಕ್ಕಿದೆ.

ಮಕ್ಕಳ ಮಾರಾಟ ಜಾಲ ಪ್ರಕರಣದ ತನಿಖೆಗೆ ಇಳಿದ ಪೊಲೀಸರಿಗೆ ಈಗಾಗಲೇ ಸಿಕ್ಕಿಬಿದ್ದಿರುವ ಶ್ರೀಮತಿ ಅಲಿಯಾಸ್ ಸರಸ್ವತಿ ನಾಡಿಗ್ ಹಾಗೂ ಮಗಳು ಲಕ್ಷ್ಮಿ ಮತ್ತೊಂದು ಮಗುವನ್ನೂ ಸಹ ಮಾರಾಟ ಮಾಡಿರುವುದನ್ನು ಬಾಯಿಬಿಟ್ಟಿದ್ದಾರೆ.

ಎರಡನೇ ಪ್ರಕರಣದ ಕುರಿತು ಮಾಹಿತಿ ನೀಡಿದ ಎಸ್‌ಪಿ ಆರ್.ಚೇತನ್, ನಂಜನಗೂಡು ಪಟ್ಟಣದ ಮಂಜುಳಾ ಎಂಬವರಿಗೆ ಸೇರಿದ 8 ತಿಂಗಳ ಮಗುವನ್ನು ಹಣಕ್ಕಾಗಿ ಕೊಳ್ಳೇಗಾಲದ ದಂಪತಿಗೆ ಮಾರಾಟ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಶ್ರೀಮತಿ ಬಾಯ್ಬಿಟ್ಟಿದ್ದಾಳೆ. ಮಂಜುಳಾ ಗೃಹಿಣಿಯಾಗಿದ್ದು, ಪತಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದಾನೆ. ಬಡತನ ಹಿನ್ನೆಲೆಯಲ್ಲಿ ಮಗು ಮಾರಾಟದ ಜಾಲಕ್ಕೆ ಸಿಲುಕಿರುವ ಸಾಧ್ಯತೆಯಿದೆಯೆಂದು ತಿಳಿಸಿದರು.

ಎರಡೂ ಪ್ರಕರಣಗಳಲ್ಲಿಯೂ ಎನ್.ಆರ್.ಮೊಹಲ್ಲಾದ ಎಸ್‌ಎಲ್‌ಇಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳು ಜನಿಸಿರುವುದು ಪ್ರಕರಣದಲ್ಲಿ ಆಸ್ಪತ್ರೆಯ ಪಾತ್ರದ ಕುರಿತು ಸಂಶಯ ವ್ಯಕ್ತವಾಗಿದೆ.

ಜ್ಯೋತಿ ಎಂಬವರಿಂದ ಪಡೆದ ಮೊದಲ ಮಗುವನ್ನು ಹೊಳೆನರಸೀಪುರದ ದಂಪತಿಗೆ 4 ಲಕ್ಷ ರೂ.ಗೆ ಮಾರಾಟ ಮಾಡಿರುವ ಪ್ರಕರಣದ ತನಿಖೆ ಪ್ರಾರಂಭಿಕ ಹಂತದಲ್ಲಿದ್ದು, ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುವುದು. ಎರಡು ಪ್ರಕರಣಗಳಲ್ಲಿ 3 ಹಾಗೂ 8 ತಿಂಗಳ ಎರಡು ಶಿಶುಗಳನ್ನು ರಕ್ಷಿಸಿದ್ದು, ಮಕ್ಕಳ ಆರೈಕೆ ಕೇಂದ್ರದ ಸುಪರ್ದಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸರಸ್ವತಿ ಮತ್ತು ಅವರ ಪುತ್ರಿ ಇಬ್ಬರಿಗೂ ಭಿಕ್ಷುಕರು, ನಿರ್ಗತಿಕರು, ವಿಧವೆಯರು, ಬೀದಿಬದಿಯ ನಿವಾಸಿಗಳೇ ಟಾರ್ಗೆಟ್‌ ಆಗಿದ್ದರು. ʻನಾನು ಅನಾಥಾಶ್ರಮ ನಡೆಸುತ್ತಿದ್ದೇನೆ, ನಿಮ್ಮ ಮಗುವನ್ನು ಚೆನ್ನಾಗಿ ಸಾಕುತ್ತೇನೆʼ ಎಂದು ಪುಸಲಾಯಿಸಿ, ಮಹಿಳೆಯರಿಂದ ಮಕ್ಕಳನ್ನು ಪಡೆದು ನಂತರ ಬೇರೆಯವರಿಗೆ ಲಕ್ಷಾಂತರ ರೂ.ಗೆ ಮಾರಾಟ ಮಾಡುತ್ತಿದ್ದರು ಎನ್ನುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.

× Chat with us