ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಅಂಗವಾಗಿ ಕೋಲಾರ ಜಿಲ್ಲೆಯ ಪ್ರವಾಸದಲ್ಲಿರುವ ಕುಮಾರಸ್ವಾಮಿ ನವೆಂಬರ್ 22ರಂದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಲೆಯೊಂದರ ದು:ಸ್ಥಿತಿ ನೋಡಿದ ಬಳಿಕ ಮಾಜಿ ಸ್ಪೀಕರ್ ಬಗ್ಗೆ ತಮ್ಮ ಆಪ್ತರ ಬಳಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ವೈರಲ್ ಆಗಿ ವಿವಾದಕ್ಕೆ ಕಾರಣವಾಗಿತ್ತು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಬಂಗವಾದಿ ಹಾಗೂ ಮಾಸ್ತೇನಹಳ್ಳಿ ಗ್ರಾಮಕ್ಕೆ ರಥಯಾತ್ರೆ ಬರುತ್ತಿದ್ದ ವೇಳೆ ನೂರಾರು ಶಾಲಾ ಮಕ್ಕಳು ಕುಮಾರಸ್ವಾಮಿ ರಥಯಾತ್ರೆ ಬಳಿ ಬಂದು ಪ್ರತಿಭಟನೆ ಮಾಡಿದರು. ಆಗ ರಥಯಾತ್ರೆ ಬಿಟ್ಟು ಕೆಳಗಿಳಿದು ಬಂದ ಕುಮಾರಸ್ವಾಮಿ ಪುಟ್ಟ ಮಕ್ಕಳ ಸಮಸ್ಯೆಯನ್ನು ಆಲಿಸಿದರು. ಮೂರು ನಾಲ್ಕು ವರ್ಷಗಳಿಂದ ಸರ್ಕಾರಿ ಶಾಲೆ ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದೆ. ಪಾಠ ಕೇಳಲು ಕಟ್ಟಡವಿಲ್ಲದೆ ಅಶ್ವಥಕಟ್ಟೆ, ಹಾಲಿನ ಡೈರಿ, ದೇವಸ್ಥಾನ ಹೀಗೆ ಎಲ್ಲೆಂದರಲ್ಲಿ ಕುಳಿತು ಪಾಠ ಕೇಳುವ ಸ್ಥಿತಿ ಬಂದಿದೆ ಎಂದು ಮಕ್ಕಳು ಅಳಲು ತೋಡಿಕೊಂಡಿದ್ದರು. ಕುಮಾರಸ್ವಾಮಿ ಮಕ್ಕಳ ಜೊತೆಗೆ ತೆರಳಿ ಶಾಲಾ ಕಟ್ಟಡವನ್ನು ವೀಕ್ಷಣೆ ಮಾಡಿ ಆದಷ್ಟು ಬೇಗ ಶಾಲಾ ಕಟ್ಟಡ ಸರಿಪಡಿಸಿಕೊಡುವ ಭರವಸೆ ಕೊಟ್ಟು ವಾಪಸ್ಸಾಗುತ್ತಿದ್ದರು.
ಕಾರು ಹತ್ತುವ ವೇಳೆಯಲ್ಲಿ ಆಕ್ರೋಶದಿಂದ ಮಾತನಾಡಿದ್ದ ಕುಮಾರಸ್ವಾಮಿ, ಶ್ರೀನಿವಾಸಪುರದ ಹಾಲಿ ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ಮಾತನಾಡುತ್ತಾ, “ ಅಷ್ಟೊಂದು ಭಾಷಣ ಮಾಡ್ತಾನೆ ಸೂ.. ಮಗ. ಇದು ಸ್ಕೂಲ್ ಕಥೆ, ಮಕ್ಕಳು ಕೂಡಾ ಅದೇ ಹೇಳ್ತಿದ್ದಾರೆʼʼ ಎಂದು ತಮ್ಮ ಕಾರ್ನಲ್ಲಿ ಕುಳಿತಿದ್ದ ನಿಖಿಲ್ ಕುಮಾರಸ್ವಾಮಿ ಹಾಗೂ ಇತರರನ್ನು ಉದ್ದೇಶಿಸಿ ಹೇಳಿದ್ದರು.
ಈ ವಿಡಿಯೋ ಪ್ರಸಾರವಾಗುತ್ತಿದ್ದಂತೆ ಕುಮಾರಸ್ವಾಮಿ ತಮ್ಮ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ನಾನು ಬಳಸಿದೆ ಎನ್ನಲಾದ ಪದ ಸ್ವತಃ ನನಗೂ ನೋವುಂಟು ಮಾಡಿದೆ. ಆ ಪದ ಬಳಕೆ ನನ್ನ ಜಾಯಮಾನವಲ್ಲ, ನನ್ನ ವ್ಯಕ್ತಿತ್ವವೂ ಅಲ್ಲ. ಈ ಮಾತಿನಿಂದ ರಮೇಶ್ ಕುಮಾರ್ ಅವರಿಗಾಗಲಿ, ಇನ್ನಾರಿಗೆ ಆಗಲಿ ನೋವಾಗಿದ್ದರೆ ನನ್ನ ವಿಷಾದವಿದೆ. ಆ ಮಾತನ್ನು ಹಿಂಪಡೆಯುತ್ತೇನೆʼʼ ಎಂದು ಎಚ್.ಡಿ.ಕೆ ಟ್ವೀಟ್ ಮಾಡಿದ್ದಾರೆ.
“ ಮಕ್ಕಳು 2-3 ವರ್ಷದಿಂದ ಎದುರಿನ ಅಶ್ವತ್ಥಕಟ್ಟೆ ಮೇಲೆ ಕುಳಿತು ಪಾಠ ಕೇಳುತ್ತಿದ್ದರು ಎಂದು ಕೇಳಿ ನನ್ನಲ್ಲಿ ಆಕ್ರೋಶ ಉಂಟಾಗಿತ್ತು. ಈ ಆಕ್ರೋಶದ ಹಿನ್ನೆಲೆಯಲ್ಲಿ ಮಾತನಾಡುವ ಭರದಲ್ಲಿ ಹಾಗೆ ಮಾತನಾಡಿದ್ದೇನೆ ಹೊರತು, ಯಾರಿಗೂ ಅಪಮಾನ ಮಾಡುವುದಕ್ಕೆ ಅಲ್ಲ. ಮಕ್ಕಳ ಕಣ್ಣೀರು ನನ್ನ ಸಿಟ್ಟಿಗೆ ಕಾರಣವಾಯಿತುʼʼ ಎಂದು ಎಂದು ಕುಮಾರಸ್ವಾಮಿ ತಮ್ಮ ಹೇಳಿಕೆಗೆ ಸ್ವಷ್ಟನೆ ನೀಡಿದ್ದಾರೆ.
ಕುಮಾರಸ್ವಾಮಿ ಅವರ ಹೇಳಿಕೆಯನ್ನು ರಮೇಶ್ ಕುಮಾರ್ ಬೆಂಬಲಿಗರು ಖಂಡಿಸಿದ್ದು ಗುರುವಾರ ಬೆಳಿಗ್ಗೆ ಹತ್ತು ಗಂಟೆಗೆ ಕೋಲಾರದ ಪುರಸಭೆ ಎದುರಿನ ಸರ್ಕಲ್ನಲ್ಲಿ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.