ಸಿದ್ದರಾಮಯ್ಯ ತೇಜೋವಧೆ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ!

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆಯುತ್ತಿರುವ ವೈಯಕ್ತಿಕ ದಾಳಿಗಳನ್ನು ಕೂಡಲೇ ನಿಲ್ಲಿಸಬೇಕು. ಇದು ಹೀಗೆ ಮುಂದುವರಿದರೆ ಕುರುಬ ಸಮುದಾಯವು ಸಹಿಸುವುದಿಲ್ಲ. ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಎಚ್ಚರಿಸಿದರು.

ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುರುಬ ಸಮುದಾಯದ ಹಿರಿಯ ನಾಯಕರಾದ ಸಿದ್ದರಾಮಯ್ಯ ಅವರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ‘ದಲಿತರ ಬಗ್ಗೆನಾನು ಹೇಳಿಲ್ಲ’ ಎಂದು ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದರೂ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಟ್ವೀಟ್ ಮೂಲಕ ಆ ವಿಚಾರ ಕೆದಕಿರುವುದು ಸಹಿಸುವುಂತಹದಲ್ಲ. ಕೆಲವು ದಿನಗಳಿಂದ ಕುರುಬ ಸಮುದಾಯವನ್ನು ಗುರಿಯಾಗಿರಿಸಿಕೊಂಡು, ಕೆಲವು ರಾಜಕೀಯ ನಾಯಕರು ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ. ಸಮುದಾಯಗಳ ನಡುವೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕುರುಬ- ದಲಿತ ಜತೆಗೆ ಕುರುಬ-ಮುಸಲ್ಮಾನ ಸಮುದಾಯದ ನಡುವೆ ಹುಳಿ ಹಿಂಡುವ ಕೆಲಸ ಮಾಡಲಾಗುತ್ತಿದೆ. ಎರಡೂ ಸಮುದಾಯಗಳ ನಡುವೆ ಅನ್ಯೋನ್ಯ ಬಾಂಧವ್ಯವಿದೆ. ಇಂತಹವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಾಕೀತು ಮಾಡಿದರು.

ಕುರುಬರ ಸಂಘದ ಮಾಜಿ ನಿರ್ದೇಶಕ ಎಂ.ಶಿವಣ್ಣ ಮಾತನಾಡಿ, 2008ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ನಗರ ಕ್ಷೇತ್ರದಲ್ಲಿ ಹಾಲಿ ಶಾಸಕ ಮಂಚನಹಳ್ಳಿ ಮಹದೇವು ಬದಲಾಗಿ ಆ ಕ್ಷೇತ್ರದಿಂದ ಎಚ್.ವಿಶ್ವನಾಥ್ ಸ್ಪರ್ಧಿಸಲು ಸಿದ್ದರಾಮಯ್ಯ ಅವಕಾಶ ಮಾಡಿಕೊಟ್ಟಿದ್ದರು. ಅಲ್ಲಿ ಹೀನಾಯವಾಗಿ ಸೋತ ಬಳಿಕವೂ 2009ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದಿದ್ದರು. ಆದರೂ ಅವರ ಬಗ್ಗೆ ವಿಶ್ವನಾಥ್ ಟೀಕೆ ಮಾಡುತ್ತಿರುವುದು ಸರಿಯಲ್ಲ. ಯಾರನ್ನೋ ಮೆಚ್ಚಿಸಲು ಈ ರೀತಿಯ ಹೇಳಿಕೆ ನೀಡುವ ಸಮಾಜದ ಬಗ್ಗೆ ಅಪನಂಬಿಕೆ ಸೃಷ್ಟಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರ ಪಾಲಿಕೆ ಸದಸ್ಯ ಜೆ.ಗೋಪಿ, ಹಿರಿಯ ಮುಖಂಡ ಮಹದೇವಯ್ಯ, ಯುವ ಮುಖಂಡ ಅಭಿಲಾಷ್, ಚೌಹಳ್ಳಿ ಪುಟ್ಟಸ್ವಾಮಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

× Chat with us