ಸಿಎಂ ಯಡಿಯೂರಪ್ಪ ಮತ್ತು ಅವರ ಮಗ ಜೆಸಿಬಿಯಲ್ಲಿ ಹಣ ದೋಚುತ್ತಿದ್ದಾರೆ: ಸಿದ್ದರಾಮಯ್ಯ

ಮೈಸೂರು: ಮುಖ್ಯಮಂತ್ರಿ ಮತ್ತು ಅವರ ಮಗ ಜೆಸಿಬಿಯಲ್ಲಿ ಹಣ ದೋಚುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಕೆಪಿಸಿಸಿ ಮೈಸೂರು ನಗರ ಹಾಗೂ ಗ್ರಾಮಾಂತರ ಸಮಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ʻಸಹಾಯ ಹಸ್ತʼ ಸೈಕಲ್‌ ಜಾಥಾಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಪ್ರಧಾನಿ ಮೋದಿ ಅವರು ಅಚ್ಛೇ ದಿನ್ ಬರುತ್ತದೆ ಎಂದರೆ ಕೆಟ್ಟ ದಿನಗಳು ಮುಂದೆ ಕಾದಿವೆ ಎಂದು ಅರ್ಥೈಸಿಕೊಳ್ಳಬೇಕು. ರಾಜ್ಯದಲ್ಲಿ ಅತ್ಯಂತ ಕೆಟ್ಟ ಸರ್ಕಾರ ಇದೆ. ಮುಖ್ಯಮಂತ್ರಿ ಮತ್ತು ಅವರ ಮಗ ಜೆಸಿಬಿಯಲ್ಲಿ ಹಣ ದೋಚುತ್ತಿದ್ದಾರೆ. ಯಡಿಯೂರಪ್ಪ ಅವರು ಈಗಾಗಲೇ ಒಂದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಜನರಿಗೆ ಒಳ್ಳೆಯದಾಗಬೇಕಾದರೆ ಈ ಸರ್ಕಾರ ತೊಲಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಅಭಿಪ್ರಾಯಪಟ್ಟರು.

ಕಳೆದ ಏಳು ವರ್ಷದಲ್ಲಿ ಕೇಂದ್ರ ಸರ್ಕಾರ ರಾಜ್ಯದಿಂದ ಪೆಟ್ರೋಲ್, ಡೀಸೆಲ್ ಮಾರಾಟದ ಮೇಲೆ ವಸೂಲಿ‌ ಮಾಡಿರುವ ತೆರಿಗೆ ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ. ಕೇಂದ್ರ ಸರ್ಕಾರ ಕೂಡಲೇ ತೆರಿಗೆ ಕಡಿಮೆ ಮಾಡಿ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಬೇಕು. ಬಿಜೆಪಿ ಎಂದರೆ ಜಿಗಣೆ ಇದ್ದಂತೆ. ಜನರ ರಕ್ತ ಹೀರುವುದು ಅವರ ಕೆಲಸ. ಆದರೆ ಕಾಂಗ್ರೆಸ್ ಜನರ ಕಣ್ಣೀರು ಒರೆಸುವ ಕೆಲಸ ಮಾಡುತ್ತದೆ ಎಂದು ತಿಳಿಸಿದರು.

ಆರೋಗ್ಯ ಸಚಿವ ಡಾ.ಸುಧಾಕರ್ ಲಸಿಕೆ ಇದೆ ಅಂತಾರೆ. 100 ಕೋಟಿ ಜನರಿಗೆ ಕೊರೊನಾ ಲಸಿಕೆ ಹಾಕಬೇಕು. 12 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಹಾಕಲಿ. ಎಲ್ಲರಿಗೂ ಲಸಿಕೆ ನೀಡಲು 200 ಕೋಟಿ ಲಸಿಕೆ ಬೇಕು. ಆದರೆ ಇವರ ಬಳಿ 200 ಕೋಟಿಯಷ್ಟು ಲಸಿಕೆ ಇಲ್ಲ. ಸುಧಾಕರ್ ಕೊರೊನಾ ಲಸಿಕೆ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಸರ್ಕಾರದ ಚರ್ಮ ಲೂಟಿ ಹೊಡೆದು ದಪ್ಪ ಆಗಿದೆ. ಜನರಿಗೆ ಸಹಾಯ ಮಾಡಬೇಕು, ರಕ್ತ ಕುಡಿಯುವುದಲ್ಲ ಸರ್ಕಾರದ ವಿರುದ್ಧ ಕಿಡಿಕಾರಿದರು.

× Chat with us