ಸಿದ್ದರಾಮಯ್ಯ ತಮ್ಮ ಮನಸ್ಸಿನ ನೋವು ಹೇಳಿಕೊಂಡಿದ್ದಾರೆ: ಜಿ.ಟಿ.ದೇವೇಗೌಡ

ಮೈಸೂರು: ಮೈತ್ರಿ ಸರ್ಕಾರ ಪತನಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ಕಾರಣ ಎಂದು ಜಾ.ದಳ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಮಾಜಿ ಸಿಎಂಗಳ ಪರಸ್ಪರ ವಾಗ್ವಾದ ಕುರಿತು ನಗರದಲ್ಲಿ ಭಾನುವಾರ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡ, ʻಮೈತ್ರಿ ಸರ್ಕಾರ ಪತನಕ್ಕೆ ಇಬ್ಬರೂ ಕಾರಣ‌. ಮೈತ್ರಿ ಸರ್ಕಾರ ಬೀಳುತ್ತೆ ಅಂತ ಗೊತ್ತಿದ್ದರೂ ಕುಮಾರಸ್ವಾಮಿ ಅವರು ಅಮೆರಿಕಕ್ಕೆ ಹೋಗಿ ಕುಳಿತುಕೊಂಡರು. ಶಾಸಕರು ಪಕ್ಷ ಬಿಟ್ಟು ಹೋಗ್ತಾರೆ ಅಂತ ಸಿದ್ದರಾಮಯ್ಯ ಅವರಿಗೂ ಗೊತ್ತಿತ್ತು. ಮನಸ್ಸು ಮಾಡಿದ್ದರೆ ಅದನ್ನು ಸಿದ್ದರಾಮಯ್ಯ ತಡೆಯಬಹುದಿತ್ತು. ಆದರೆ, ತಡೆಯುವ ಪ್ರಯತ್ನ ಮಾಡಲಿಲ್ಲ. ಆದ್ದರಿಂದ ಮೈತ್ರಿ ಸರ್ಕಾರ ಬೀಳುವುದಕ್ಕೆ ಇಬ್ಬರೂ ಕಾರಣಕರ್ತರಾಗಿದ್ದಾರೆ ಎಂದು ಇಬ್ಬರಿಗೂ ತಿರುಗೇಟು ನೀಡಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ತಮ್ಮ ಮನಸ್ಸಿನ ನೋವನ್ನು ಹೇಳಿಕೊಂಡಿದ್ದಾರೆ. ಈ ಮೊದಲು ವರುಣ ಚಾಮುಂಡೇಶ್ವರಿ ಒಂದೇ ಕ್ಷೇತ್ರವಾಗಿತ್ತು. ತಾಲ್ಲೂಕು ಬೋರ್ಡ್ ಮೆಂಬರ್‌ನಿಂದ ಹಿಡಿದು ಉಪ ಮುಖ್ಯಮಂತ್ರಿ ಆಗುವವರೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಇದ್ದರು. ವರುಣ ಕ್ಷೇತ್ರ ಉದಯವಾದ ನಂತರ ಅಲ್ಲಿಗೆ ಹೋಗಿ ಗೆದ್ದು ಮುಖ್ಯಮಂತ್ರಿಯಾದರು. ಆದರೂ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ ಆಗಬೇಕೆಂದು ಬಯಸಿದ್ದರು. ಆದರೆ, ಜನ ಅವರನ್ನು ಕೈ ಹಿಡಿಯಲಿಲ್ಲ. ನೀವೇ ನನ್ನನ್ನು ಕೈ ಬಿಟ್ಟಿರಿ ಎಂದು ಕಾರ್ಯಕರ್ತರ ಬಳಿ ನೋವನ್ನು ಹೇಳಿಕೊಂಡಿದ್ದಾರೆ ಎಂದು ತಿಳಿಸಿದರು.

ಜಾ.ದಳ-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದವು ಎಂಬ ಆರೋಪಕ್ಕೆ ಉತ್ತರಿಸಿ, ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ 8 ಸಾವಿರ ಮತಗಳನ್ನು ಪಡೆದಿತ್ತು. ಆಗ ಹೇಮಂತ್‌ಕುಮಾರ್ ಗೌಡ ಅಭ್ಯರ್ಥಿಯಾಗಿದ್ದರು. 2018ರ ಚುನಾವಣೆಯಲ್ಲಿ ಗೋಪಾಲ್ ರಾವ್ ಅಭ್ಯರ್ಥಿಯಾಗಿದ್ದರು. ಬಿಜೆಪಿ 15 ಸಾವಿರ ಮತ ಪಡೆಯಿತು. ನಾನು ಸ್ಪರ್ಧಿಸಿದ್ದ ಚುನಾವಣೆಯಲ್ಲಿ ಬಿಜೆಪಿ ಡಬಲ್ ಓಟ್ ಪಡೆದುಕೊಂಡಿದೆ ಎಂದರು.

ಸುಬ್ರಹ್ಮಣ್ಯ ಷಷ್ಠಿ ಹಿನ್ನೆಲೆಯಲ್ಲಿ ಮೈಸೂರಿನ ಹೊರವಲಯದ ಸಿದ್ದಲಿಂಗಪುರದಲ್ಲಿರುವ ಸುಬ್ರಹ್ಮಣ್ಯೇಶ್ವರಸ್ವಾಮಿ ದೇಗುಲದಲ್ಲಿ ಶಾಸಕ ಜಿ.ಟಿ.ದೇವೇಗೌಡ ತಮ್ಮ ಪುತ್ರನೊಂದಿಗೆ ಷಷ್ಠಿ ಪೂಜೆ ನೆರವೇರಿಸಿದರು.

× Chat with us