ಸರ್ಕಾರಾನೇ ಸತ್ಮೇಲೆ ಸಿಎಂ ಬದಲಾವಣೆ ಮಾಡಿದ್ರೇನು, ಮಾಡ್ದೆ ಇದ್ರೇನು: ಶಿವರಾಜ್‌ ತಂಗಡಗಿ ಪ್ರಶ್ನೆ

ಕೊಪ್ಪಳ: ರಾಜ್ಯದಲ್ಲಿ ಸರ್ಕಾರ ಇದೆಯಾ? ಸರ್ಕಾರಾನೇ ಸತ್ಮೇಲೆ ಮುಖ್ಯಮಂತ್ರಿ ಬದಲಾವಣೆ ಮಾಡಿದರೂ ಅಷ್ಟೇ, ಮಾಡದೇ ಇದ್ದರೂ ಅಷ್ಟೆ ಎಂದು ಮಾಜಿ ಸಚಿವ ಶಿವರಾಜ್‌ ಎಸ್.ತಂಗಡಗಿ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಸರ್ಕಾರದ ಇದೆ ಅಂತಿರಾ? ಹಾಗಾದರೆ ಎಲ್ಲಾ ಸಚಿವರು ಏನು ಮಾಡುತ್ತಿದ್ದಾರೆ? ಸಚಿವರು ಪ್ರವಾಸ ಸಭೆ ಮಾಡೋದು ಬಿಟ್ಟು ಬೇರೆ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ನಳಿನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನೆಡಸಿದ ತಂಗಡಗಿ, ಕಟೀಲ್ ಒಬ್ಬ ರಾಜ್ಯಾಧ್ಯಕ್ಷನಾ‌‌? ಒಬ್ಬ ಗ್ರಾಪಂ ಅಧ್ಯಕ್ಷ ಆಗುವುದಕ್ಕೂ ಲಾಯಕ್ ಇಲ್ಲ. ದೇಶದಲ್ಲಿ ಆಡಳಿತ ಮಾಡುವವರು ನೀವು. ನಿಮಗೆ ಕುಣಿಯುವದಕ್ಕೆ ಬರುವುದಲ್ಲ ಅಂದರೆ ನೆಲ ಡೊಂಕು ಅಂತಾ ಹೇಳುತ್ತೀರಾ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಡವರ ಅಕ್ಕಿ 7 ಕೆಜಿ ಇದ್ದಿದ್ದನ್ನು 2 ಕೆಜಿ ಮಾಡಿದ್ದೀರಿ. ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರು ಕೆಲಸ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಬಿಜಿಪಿ ಆಡಳಿತದಿಂದ ಜನ ಸಾಯಿಸುತ್ತಿದ್ದಾರೆಯೇ ಹೊರತು ಬದುಕಲು ಆಗುತ್ತಿಲ್ಲ ಎಂದು ಬೇಸರಿಸಿದರು.

× Chat with us