ಲೈಂಗಿಕ ದೌರ್ಜನ್ಯ ಆರೋಪ: ಪ್ರಾಧ್ಯಾಪಕ ದಂಪತಿಗೆ ಮೈಸೂರು ವಿವಿ ನೋಟಿಸ್

ಮೈಸೂರು: ಸಂಶೋಧನಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಆಧಾರಿಸಿ ಮೈಸೂರು ವಿಶ್ವವಿದ್ಯಾನಿಲಯವು ಪ್ರಾಧ್ಯಾಪಕ ದಂಪತಿಗೆ ಕಾರಣ ಕೇಳಿ ಪ್ರತ್ಯೇಕ ನೋಟಿಸ್ ಜಾರಿಗೊಳಿಸಿದೆ.

ಮಾನಸಗಂಗೋತ್ರಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಜಿ.ಟಿ.ರಾಮಚಂದ್ರಪ್ಪ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಡಾ.ಎನ್.ಕೆ.ಲೋಲಾಕ್ಷಿ ಅವರಿಗೆ ಕುಲಸಚಿವ ಪ್ರೊ.ಶಿವಪ್ಪ ಅವರು ನೋಟಿಸ್ ಜಾರಿ ಮಾಡಿದ್ದಾರೆ.

ನೋಟಿಸ್‌ನಲ್ಲೇನಿದೆ?

ಡಾ.ಎನ್.ಕೆ.ಲೋಲಾಕ್ಷಿ ಆದ ನೀವು, ನಿಮ್ಮ ಪ್ರಾಧ್ಯಾಪಕ ಪತಿ ಡಾ.ಜಿ.ಟಿ.ರಾಮಚಂದ್ರಪ್ಪ ಅವರು ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುತ್ತಾರೆಂದು ಆರೋಪಿಸಿದ್ದೀರಿ. ಈ ಸಂಬಂಧ ಆ.6ರಂದು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿರುವುದು ವಿಶ್ವವಿದ್ಯಾನಿಲಯದ ಗಮನಕ್ಕೆ ಬಂದಿದೆ. ಇಬ್ಬರೂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿದ್ದು, ಪ್ರಕರಣವನ್ನು ಪರಾಮರ್ಶಿಸದ ಜತೆಗೆ, ಮಾಧ್ಯಮಗಳಿಗೆ ಹೇಳಿಕೆ ನೀಡುವ ಮುನ್ನ ಪೂರ್ವಾನುಮತಿ ಪಡೆಯದೇ ಇರುವುದು ವಿಶ್ವವಿದ್ಯಾನಿಲಯದ ನಿಯಮಗಳಿಗೆ ವಿರುದ್ಧವಾಗಿದೆ. ಈ ರೀತಿಯ ಹೇಳಿಕೆಗಳಿಂದ ವಿಶ್ವವಿದ್ಯಾನಿಲಯದ ಘನತೆಗೆ ಧಕ್ಕೆಯುಂಟಾಗಿದೆ. ಈ ನಡವಳಿಕೆ ಅಶಿಸ್ತಿನಿಂದ ಕೂಡಿರುವಂತದ್ದಾಗಿದೆ. ಲಿಖಿತ ಹೇಳಿಕೆಯನ್ನು ಈ ನೋಟಿಸ್ ತಲುಪಿದ ೩ ದಿನಗಳ ಒಳಗಾಗಿ ನೀಡಬೇಕು. ಇಲ್ಲವಾದಲ್ಲಿ ಸಿಸಿಎ ಅಧಿನಿಯಮಗಳನ್ವಯ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಇಬ್ಬರಿಗೂ ಪ್ರತ್ಯೇಕ ನೋಟಿಸ್‌ನಲ್ಲಿ ತಿಳಿಸಲಾಗಿದೆ.

× Chat with us