ಮೈಸೂರಿನಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಉದ್ಯಮ ಪಾಕ್೯

ಬೆಂಗಳೂರು: ಮಹಿಳೆಯರನ್ನು ಉದ್ಯಮದತ್ತ ಇನ್ನಷ್ಟು ಆಕರ್ಷಿಸಲು ಮೈಸೂರು, ಧಾರವಾಡ, ಹಾರೋಹಳ್ಳಿ ಮತ್ತು ಕಲಬುರಗಿಯಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಮಹಿಳಾ ಉದ್ಯಮ ಪಾರ್ಕ್‌ಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಹೇಳಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಅಂತಾರಾಷ್ಟ್ರೀಯ ಮಹಿಳಾ ಉದ್ಯಮ ಶೀಲತಾ ಪ್ರಯುಕ್ತ ಉಬುಂಟು ಸಂಸ್ಥೆ ಹಮ್ಮಿಕೊಂಡಿದ್ದ ’ಟುಗೆದರ್ ವಿ ಗ್ರೋ ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ದೇಶದಲ್ಲೇ ಮೊದಲ ಬಾರಿಗೆ ಮಹಿಳಾ ಉದ್ಯಮಿಗಳಿಗಾಗಿಯೇ ನಿರ್ದಿಷ್ಟ ಕೈಗಾರಿಕಾ ಪಾರ್ಕ್ ಸ್ಥಾಪಿಸುತ್ತಿರುವ ಮೊದಲ ರಾಜ್ಯ ನಮ್ಮ ಕರ್ನಾಟಕ. ಇದರ ಸದುಪಯೋಗವನ್ನು ಪಡೆದುಕೊಂಡರೆ ಇದರ ಉದ್ದೇಶ ಸಾರ್ಥಕವಾಗುತ್ತದೆ. ಮಹಿಳೆಯರು ಸ್ವಯಂ ಉದ್ಯಮಿಗಳಾಗಿ ಇನ್ನೊಬ್ಬರಿಗೆ, ಉದ್ಯೋಗ ನೀಡುವ ಹಂತಕ್ಕೆ ಬೆಳೆಯುವ ಮೂಲಕ ರಾಜ್ಯದ ಕೈಗಾರಿಕಾ ಪ್ರಗತಿಯಲ್ಲಿ ಕೈ ಜೋಡಿಸಬೇಕು ಎಂದು ಹೇಳಿದರು.

ಇನ್ಫೋಸಿಸ್‌ನ ಡಾ.ಸುಧಾ ನಾರಾಯಣಮೂರ್ತಿ, ಬಯೋಟೆಕ್ ಸಂಸ್ಥೆಯ ಕಿರಣ್ ಮಜುಂದಾರ್ ಷಾ, ಸೇರಿದಂತೆ ಅನೇಕ ಯಶಸ್ವಿ ಮಹಿಳಾ ಉದ್ಯಮಿಗಳು ನಮಗೆಲ್ಲರಿಗೂ ಆದರ್ಶಪ್ರಾಯವಾಗಿದ್ದಾರೆ. ಅವರ ಜೀವನದ ಯಶೋಗಾಧೆ ಇಂದಿನ ಯುವ ಮಹಿಳಾ ಉದ್ಯಮಿಗಳಿಗೆ ಪ್ರೇರಣೆಯಾಗಬೇಕು ಎಂದು ಆಶಿಸಿದರು.

× Chat with us