ʻಆಂದೋಲನʼ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ನೆನಪು

ಮೈಸೂರು: ʻಆಂದೋಲನʼ ದಿನಪತ್ರಿಕೆ ಸಂಸ್ಥಾಪಕ ಸಂಪಾದಕರಾದ ಹಾಗೂ ಹಿರಿಯ ಪತ್ರಕರ್ತರಾದ ರಾಜಶೇಖರ ಕೋಟಿ ಅವರ ಸ್ಮರಣೆ ಕಾರ್ಯಕ್ರಮಗಳು ಸೋಮವಾರ ನಗರದಲ್ಲಿ ನಡೆದವು.

ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ರಾಜಶೇಖರ ಕೋಟಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಅಲ್ಲದೇ, ಪತ್ರಿಕೋದ್ಯಮ ಕ್ಷೇತ್ರ ಹಾಗೂ ಸಮಾಜಕ್ಕೆ ರಾಜಶೇಖರ ಕೋಟಿ ಅವರ ಕೊಡುಗೆಯನ್ನು ಸ್ಮರಿಸಲಾಯಿತು. ಉಪಾಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ, ಭೂಮಿಗಿರಿ ಪ್ರಕಾಶನದ ಎನ್.ಬೆಟ್ಟೇಗೌಡ, ದಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ವಿ.ಮಧು ವೆಂಕಟಾಚಲ, ಯಾದವಗಿರಿಯ ಗೋವಿಂದರಾಜು ಇದ್ದರು.

ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸೋಮವಾರ ನಗರದ ವಿವಿ ಮೊಹಲ್ಲಾದಲ್ಲಿರುವ ಚಲುವಾಂಬ ಉದ್ಯಾನದ ವಿವೇಕಾನಂದರ ಪ್ರತಿಮೆ ಮುಂಭಾಗ ಪತ್ರಕರ್ತ ರಾಜಶೇಖರ ಕೋಟಿ ಅವರ 3ನೇ ವರ್ಷದ ಸ್ಮರಣೆ ದಿನವನ್ನು ಆಚರಿಸಲಾಯಾತು.

ಸಾಹಿತಿ ಸಿ.ಪಿ.ಕೃಷ್ಣಕುಮಾರ್‌ ಮಾತನಾಡಿ, ರಾಜಶೇಖರ ಕೋಟಿ ಅವರು ಉತ್ತರ ಕರ್ನಾಟಕದಿಂದ ಬಂದು ಮೈಸೂರಿನಲ್ಲಿ ಆಂದೋಲನ ಪತ್ರಿಕೆ ಪ್ರಾರಂಭಿಸುವ ಮೂಲಕ ಹೆಸರಿನಲ್ಲಿರುವ ಕೋಟಿಯಂತೆ ಪತ್ರಿಕಾ ರಂಗಕ್ಕೇ ಕೋಟೆಯನ್ನೇ ಕಟ್ಟಿದರು. ಕೇವಲ ಪತ್ರಕರ್ತರಾಗಿ ಉಳಿಯದ ಕೋಟಿಯವರು ಸಾಮಾಜಿಕ ಪರಿಕಲ್ಪನೆಯುಳ್ಳವರಾಗಿದ್ದರು. ತಮ್ಮ ಪತ್ರಿಕೆ ಹಾಗೂ ಮೊನಚಾದ ಬರಹಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಅವರ ಬರಹದಲ್ಲಿ ಸಾಮಾಜಿಕ ಹಾಗೂ ಜಾತ್ಯತೀತ ತತ್ವಗಳನ್ನು ನಾವು ಕಾಣಬಹುದು ಎಂದು ನೆನೆದರು.

ಈ ವೇಳೆ ಟ್ರಸ್ಟ್‌ನ ಅಧ್ಯಕ್ಷ ಸತೀಶ್ ಗೌಡ, ಉಪಾಧ್ಯಕ್ಷ ಕುಮಾರ್ ಗೌಡ, ಪ್ರಧಾನ ಕಾರ್ಯದರ್ಶಿ ಎ.ರವಿ, ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ರವಿ, ಯೋಗೇಶ್ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಗುರುರಾಜ್, ದಂತ ವೈದ್ಯ ಲೋಕೇಶ್ ಇತರರು ಇದ್ದರು.

× Chat with us