ಕಾಂಗ್ರೆಸ್‌ನಲ್ಲಿ 5 ಜಾತಿಗೆ ಐವರು ಸ್ವಯಂಘೋಷಿತ ಮುಖ್ಯಮಂತ್ರಿಗಳು: ಸಚಿವ ಈಶ್ವರಪ್ಪ ಟೀಕೆ

ಮೈಸೂರು: ಕಾಂಗ್ರೆಸ್‌ನಲ್ಲಿ ಐದು ಜಾತಿಗೆ ಐವರು ಸ್ವಯಂಘೋಷಿತ ಮುಖ್ಯಮಂತ್ರಿಗಳಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಟೀಕಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಚುನಾವಣೆಯೇ ನಡೆದಿಲ್ಲ, ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. ಮಹಾಭಾರತದಲ್ಲಿ ಶ್ರೀಕೃಷ್ಣ ಆದರ್ಶ. ಆದರೆ, ಕಾಂಗ್ರೆಸ್‌ನಲ್ಲಿ ಪಂಚ ಪಾಂಡವರು. ಐದು ಜಾತಿಗೆ ಒಬ್ಬೊಬ್ಬ ಮುಖ್ಯಮಂತ್ರಿ. ಅವರು ಸ್ವಯಂಘೋಷಿತ ಮುಖ್ಯಮಂತ್ರಿಗಳು. ಚುನಾವಣೆ ನಂತರ ಅವರನ್ನು ಹುಡುಕಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.

ಪರಮೇಶ್ಚರ್‌ನ ನಾನು ಸೋಲಿಸಲಿಲ್ಲ ಅಂತ ಸಿದ್ದರಾಮಯ್ಯ ಹೇಳಲಿ. ಸಿದ್ದರಾಮಯ್ಯನ ನಾನು ಸೋಲಿಸಲಿಲ್ಲ ಅಂತ ಪರಮೇಶ್ವರ್ ಹೇಳಲಿ. ಇಬ್ಬರೂ ಹೇಳಿದಂತೆ ನಾನು ಕೇಳುತ್ತೇನೆ. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ನಾನು ಸೊಸೆ.
ಸೊಸೆ ಕೈಗೆ ಕೀ ಕೊಟ್ಟರಲ್ಲ ಎನ್ನುತ್ತಾರೆ. ಕಾಂಗ್ರೆಸ್‌ಗೂ ಸೊಸೆ, ಬಾದಾಮಿಗೂ ಸೊಸೆ. ಆದರೆ ಯಾವ ಪಕ್ಷಕ್ಕೆ ಮಗ ನೀವು ಎಂದು ಪ್ರಶ್ನಿಸಿದರು.

ಮುಂದಿನ ಚುನಾವಣೆಯಲ್ಲಿ ವಿರೋಧ ಪಕ್ಷದ ಸ್ಥಾನಕ್ಕೂ ಕಾಂಗ್ರೆಸ್ ಬರುವುದಿಲ್ಲ. ಮುಖ್ಯಮಂತ್ರಿ ಪದವಿ ಎನ್ನುವುದು ಕನಸು. 17 ಜನರನ್ನು ಯಾವುದೇ ಕಾರಣಕ್ಕೂ ವಾಪಸ್ ಕರೆದುಕೊಳ್ಳುವುದಿಲ್ಲ ಅಂತಾ ಸಿದ್ದರಾಮಯ್ಯ, ಅರ್ಜಿ ಹಾಕಿ ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ಮುಳುಗುತ್ತಿರುವ ಹಡಗು. ಅದನ್ನು ಬಿಟ್ಟು ಬಂದಿರುವ 17 ಮಂದಿ ಮತ್ತೆ ಆ ಕಡೆ ತಿರುಗಿಯೂ ನೋಡುವುದಿಲ್ಲ. ಯಾರಾದರೂ ಮತ್ತೆ ಆ ಪಕ್ಷಕ್ಕೆ ಹೊಗ್ತಾರ? ಕಾಂಗ್ರೆಸ್‌ನಲ್ಲಿ ಏಕತೆ ಇಲ್ಲ. ಡಿ.ಕೆ.ಶಿವಕುಮಾರ್ ಅವರ ಪ್ರಚಾರ ವಾಹನದಲ್ಲಿ ಸಿದ್ದರಾಮಯ್ಯ ಅವರ ಫೋಟೊ ಕಿತ್ತು ಬಿಸಾಕಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯಲ್ಲಿ ಸಿಎಂ ಬದಲಾವಣೆ ಮಾತು ಸಂಬಂಧ ಪ್ರತಿಕ್ರಿಯಿಸಿ, ಸಿಎಂ ಬಗ್ಗೆ ಮೂರ್ನಾಲ್ಕು ಜನರಷ್ಟೆ ಮಾತನಾಡುತ್ತಿದ್ದಾರೆ. ಅದನ್ನು ಬಿಟ್ಟು ಬೇರೆ ಯಾರು ಮಾತನಾಡುತ್ತಿಲ್ಲ. ಯತ್ನಾಳ್, ಯೋಗೇಶ್ವರ್, ರೇಣುಕಾಚಾರ್ಯ
ಮೂರು ಜನಕ್ಕೆ ಹೇಗೆ, ಯಾವಾಗ ಬುದ್ದಿ‌ಕಲಿಸಬೇಕು ಎಂಬುದು ಗೊತ್ತಿದೆ. ನಮ್ಮ‌ ಪಕ್ಷದಲ್ಲಿ ಅಪ್ಪ‌-ಅಮ್ಮ ಇದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ ಈ ರೀತಿ ಇಲ್ಲ. ವಿಶ್ವನಾಥ್ ಮಾತನಾಡುತ್ತಿರುವುದು ಸಿದ್ದರಾಮಯ್ಯ ಚಾಹೆಯಿಂದ. ಸ್ವಪಕ್ಷಕ್ಕೆ ಸಿದ್ದರಾಮಯ್ಯರೇ ವಿಲನ್. ಪಕ್ಷದೊಳಗೆ ಇದ್ದುಕೊಂಡು ಸಿದ್ದರಾಮಯ್ಯ ಆಟಾ ಆಡುತ್ತಿದ್ದಾರೆ. ಇದೆ ಚಾಹೆ ವಿಶ್ವನಾಥ್ ಅವರಲ್ಲೂ ಉಳಿದುಕೊಂಡಿದೆ ಎಂದು ಕಾಲೆಳೆದರು.

ನನ್ನ ಇಲಾಖೆ ಅನುದಾನ‌ ಹಂಚಿಕೆ ಬಗ್ಗೆ ರಾಜ್ಯಪಾಲರಿಗೆ ದೂರು ಕೊಟ್ಟಿರಲಿಲ್ಲ. ಶಾಸಕರ ಅಭಿಪ್ರಾಯ ಸಂಗ್ರಹಿಸಿ ಎಂದು ಪಕ್ಷದ ಅಧ್ಯಕ್ಷರಿಗೆ, ಸಿ.ಟಿ.ರವಿ ಅವರಿಗೆ ಮನವಿ ಮಾಡಿದ್ದೆ‌. ನಂತರ ಮುಖ್ಯಮಂತ್ರಿಗಳು ಕಳೆದ ಮೂರು ದಿನಗಳ ಹಿಂದೆ ನಮ್ಮ ಇಲಾಖೆಗೆ 1,200 ಕೋಟಿ ಬಿಡುಗಡೆ ಮಾಡಿ, ಎಲ್ಲಾ‌ ಶಾಸಕರಿಗೂ ಹಂಚಿಕೆ ಮಾಡುವಂತೆ ಹೇಳಿದ್ದಾರೆ. ನನ್ನ ಇಲಾಖೆಯಲ್ಲಿ ಈಗ ಯಾವುದೇ ಹಸ್ತಕ್ಷೇಪ‌ ಇಲ್ಲ ಎಂದು ಸ್ಪಷ್ಟಪಡಿಸಿದರು.

× Chat with us