ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ: ಸುರೇಶ್‌ ಕುಮಾರ್

ಬೆಂಗಳೂರು: ರಾಜ್ಯದಲ್ಲಿ ನಾಳೆ (ಜು.20) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದರು.

ಈ ಸಂಬಂಧ ಸೋಮವಾರ ಮಾತನಾಡಿದ ಅವರು, ನಾಳೆ ಸಂಜೆ 4.30ಕ್ಕೆ ಸುಮಾರಿಗೆ ಫಲಿತಾಂಶ ಪ್ರಕಟವಾಗಲಿದೆ. ಎಸ್ಎಸ್ಎಲ್​ಸಿ ಫಲಿತಾಂಶ ಮತ್ತು ಪ್ರಥಮ ಪಿಯುಸಿ ಫಲಿತಾಂಶವನ್ನು ಪರಿಗಣಿಸಿ ದ್ವಿತೀಯ ಪಿಯು ಫಲಿತಾಂಶವನ್ನು ನೀಡಲಾಗುತ್ತದೆ. ಗ್ರೇಡ್ ಬದಲಿಗೆ ಅಂಕಗಳ ಆಧಾರದಲ್ಲಿ ನಾಳೆ ಫಲಿತಾಂಶ ಹೊರಬೀಳಲಿದೆ ಎಂದು ತಿಳಿಸಿದರು.

ಫಲಿತಾಂಶ ನೋಡುವುದು ಹೇಗೆ?

ನೋಂದಣಿ ಸಂಖ್ಯೆ ಇಲ್ಲದೇ ಫಲಿತಾಂಶ ನೋಡುವುದು ಹೇಗೆ ಎಂಬ ಗೊಂದಲ ಬಗೆಹರಿಸಲು ಪಿಯು ಬೋರ್ಡ್ ಸ್ಪಷ್ಟನೆ ನೀಡಿದೆ. ಈ ಬಾರಿ ಪರೀಕ್ಷೆಯಾಗದೆ ರಿಜಿಸ್ಟರ್ ನಂಬರ್ ಸಿಕ್ಕಿಲ್ಲ. ಹೀಗಾಗಿ, ಫಲಿತಾಂಶ ಸಲುವಾಗಿ ವಿದ್ಯಾರ್ಥಿಗಳಿಗೆ ಹೊಸದಾಗಿ ರಿಜಿಸ್ಟರ್ ನಂಬರ್ ಜನರೇಟ್ ಮಾಡುವ ವ್ಯವಸ್ಥೆ ಮಾಡಲಾಗಿದೆ. Know my number ಆಯ್ಕೆಯನ್ನು ಪಿಯು ವೆಬ್​ಸೈಟ್​ ಮೂಲಕ ವಿದ್ಯಾರ್ಥಿಗಳು ಪರಿಶೀಲಿಸಬಹುದು.

ವಿದ್ಯಾರ್ಥಿಗಳಿಗೆ ಎಸ್ಎಂಎಸ್ ಮೂಲಕ ತಿಳಿಸುವುದರೊಂದಿಗೆ ಆಯಾ ಕಾಲೇಜಿಗೆ ಈ ಕುರಿತು ಮಾಹಿತಿ ನೀಡಲಾಗುತ್ತದೆ. ಫಲಿತಾಂಶಕ್ಕೂ ಮುನ್ನ ತಮ್ಮ ರಿಜಿಸ್ಟರ್ ನಂಬರನ್ನು ವಿದ್ಯಾರ್ಥಿಗಳು ಖಚಿತಪಡಿಸಿಕೊಳ್ಳಬೇಕು. ಜನರೇಟ್ ಆದ ರಿಜಿಸ್ಟರ್ ನಂಬರ್ ಅನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಆನಂತರ ಜು.20ರಂದು ವೆಬ್​ಸೈಟ್​ ಮೂಲಕ ಫಲಿತಾಂಶ ಪಡೆಯಬಹುದು ಎಂದು ತಿಳಿಸಿದೆ.

× Chat with us