ಮಂಡ್ಯ: ನಿಂತಿದ್ದ ಲಾರಿಗೆ ಬೈಕ್‌ ಡಿಕ್ಕಿ, ಇಬ್ಬರು ಮಕ್ಕಳು ಸೇರಿ ಮೂವರು ದುರ್ಮರಣ

ನಾಗಮಂಗಲ: ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟು, ಪುಟ್ಟಮಕ್ಕಳ ತಾಯಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಹೊಣಕೆರೆ ಹೊಬಳಿಯ ಗುಡ್ಡೇನಹಳ್ಳಿ ಕ್ರಾಸ್ ಬಳಿ ತುಮಕೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

ತಾಲ್ಲೂಕಿನ ಹೊಣಕೆರೆ ಗ್ರಾಮದ ಜೆಡಿಎಸ್ ಮುಖಂಡ ಹಾಗೂ ಮಾಜಿ ತಾ.ಪಂ. ಸದಸ್ಯ ಆನಂದಕುಮಾರ್ (62) ಹಾಗೂ ಮೊಮ್ಮಕ್ಕಳಾದ ಆರಾಧ್ಯ (10) ಹಾಗೂ ಗೌರವ್(5) ಮೃತ ದುರ್ದೈವಿಗಳು. ಘಟನೆಯಲ್ಲಿ ಆನಂದ್‌ಕುಮಾರ್ ಸೊಸೆ ಮೋನಿಕಾ ಗಂಭೀರ ಸ್ವರೂಪರದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಗುಡ್ಡೇನಹಳ್ಳಿ ಸಮೀಪದ ತೋಟದ ಮನೆಯಿಂದ ಸ್ವಗ್ರಾಮ ಹೊಣಕೆರೆಗೆ ತಮ್ಮ ಇಬ್ಬರು ಮೊಮ್ಮಕ್ಕಳು ಹಾಗೂ ಸೊಸೆಯೊಂದಿಗೆ ತಮ್ಮ ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಶನಿವಾರ ರಾತ್ರಿ ವೇಳೆಯಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಆನಂದ್‌ಕುಮಾರ್ ಚಾಲನೆ ಮಾಡುತ್ತಿದ್ದ ಸ್ಕೂಟರ್ ಲಾರಿ ಮುಂಭಾಗಕ್ಕೆ ಅಪ್ಪಳಿಸಿ ಸಿಲುಕಿಕೊಂಡ ಪರಿಣಾಮ 10 ವರ್ಷದ ಮೊಮ್ಮಗಳು ಆರಾಧ್ಯ ಸ್ಥಳದಲ್ಲೇ ಕೊನೆಯುಸಿರೆಳೆದರೆ, 5 ವರ್ಷದ ಮೊಮ್ಮಗ ಗೌರವ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣಬಿಟ್ಟಿದ್ದಾನೆ. ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಆನಂದ್‌ಕುಮಾರ್ ಮತ್ತು ಸೊಸೆ ಮೊನಿಕಾಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆಂದು ತಾಲ್ಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆನಂದ್‌ಕುಮಾರ್ ಮೃತಪಟ್ಟಿದ್ದಾರೆ. ಸೊಸೆ ಮೋನಿಕಾ ಸಾವು ಬದುಕಿನ ನಡುವೆ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ.

ಸುದ್ದಿ ತಿಳಿದು ಆಸ್ಪತ್ರೆಗೆ ಧಾವಿಸಿದ ತಹಸಿಲ್ದಾರ್ ಕುಂಞ ಅಹಮ್ಮದ್ ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಿ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸಲು ಶ್ರಮಿಸಿದರು. ಸಿಪಿಐ ಸುಧಾಕರ್ ಘಟನೆ ಸ್ಥಳಕ್ಕೆ ಭೇಟಿ ನೀಡಿದರು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us