8ನೇ ದಿನಕ್ಕೆ ಕಾಲಿಟ್ಟ ʻಕನ್ನಡ ವಿ.ವಿ. ಉಳಿಸಿ ಭಿತ್ತಿಪತ್ರ ಚಳವಳಿʼ

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಕನ್ನಡ ವಿ.ವಿ. ಉಳಿಸಿ ʻಭಿತ್ತಿಪತ್ರ ಚಳವಳಿ’ ಮತ್ತಷ್ಟು ತೀವ್ರಗೊಂಡಿದ್ದು, ಇಂದು ಏಳನೇ ದಿನ ಪೂರೈಸಿತು. ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು, ಕನ್ನಡ ವಿಶ್ವವಿದ್ಯಾಲಯದ ಕುರಿತು ಸರ್ಕಾರ ತೋರುತ್ತಿರುವ ಅಸಡ್ಡೆಯ ಭಾವಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಸರಾಂತ ಲೇಖಕ ಹಾಗು ಹಂಪಿ ಕನ್ನಡ ವಿವಿಯಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಎನ್.ರಾಘವೇಂದ್ರರಾವ್, ಸಮಗ್ರ ಕರ್ನಾಟಕದ ಬೌದ್ಧಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಉದ್ದೇಶದಿಂದ ಮೂಡಿಬಂದ ಕನ್ನಡ ವಿಶ್ವವಿದ್ಯಾಲಯಕ್ಕೆ ನೀಡಬೇಕಾದ ಅನುದಾನವನ್ನು ಈ ಪ್ರಮಾಣದಲ್ಲಿ ಕಡಿಮೆ ಮಾಡಿರುವುದು ಸರಿಯಲ್ಲ. ಅವರು ಸಂಪನ್ಮೂಲಗಳನ್ನು ಅರ್ಥಪೂರ್ಣವಾಗಿ, ಪ್ರಾಮಾಣಿಕವಾಗಿ ಬಳಸುವಂತೆ ನೋಡಿಕೊಂಡು ಧಾರಾಳವಾಗಿ ಹಣ ಕೊಡಬೇಕು. ಇದು ಹಂಪಿಯಲ್ಲಿದ್ದರೂ ಹೈದರಾಬಾದ್ ಕರ್ನಾಟಕಕ್ಕೆ ಸೀಮಿತವಲ್ಲ. ಎಲ್ಲ ಕನ್ನಡಿಗರದು ಎಂದು ಹೇಳಿದ್ದಾರೆ.

ಖ್ಯಾತ ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ತಮ್ಮ ಹೇಳಿಕೆಯಲ್ಲಿ, ಕನ್ನಡ ವಿಶ್ವವಿದ್ಯಾಲಯ ಕನ್ನಡದ ಹೆಮ್ಮೆ, ಕನ್ನಡದ ಅಗತ್ಯ. ಏಕೆಂದರೆ ಉಳಿದ ವಿವಿಗಳಿಗಿಂತ ಭಿನ್ನವಾಗಿ ಕನ್ನಡದಲ್ಲಿ ವಿದ್ವತ್ತನ್ನು ಬೆಳೆಸುವ ಅಪರೂಪದ ಕೆಲಸ ಮಾಡುತ್ತಿದೆ. ಹೀಗಾಗಿ ಕನ್ನಡದ ಮತ್ತು ಕನ್ನಡಿಗರ ಅಸ್ಮಿತೆ ಮತ್ತು ಭವಿಷ್ಯದ ಕಾರಣದಿಂದಲೂ ಕನ್ನಡ ವಿವಿಯನ್ನು ಉಳಿಸುವುದು ಮತ್ತು ಬೆಳೆಸುವುದು ಅತ್ಯಗತ್ಯ. ಆದರೆ ಕರ್ನಾಟಕ ಬಿಜೆಪಿ ಸರ್ಕಾರವು ತನ್ನ ಹಿಂದಿ-ಸಂಸ್ಕೃತ ಪರ ಯಾಜಮಾನ್ಯ ಸಾಂಸ್ಕೃತಿಕ ರಾಜಕಾರಣ ಹಾಗೂ ಒಕ್ಕೂಟ ವಿರೋಧಿ ಧೋರಣೆಯ ಭಾಗವಾಗಿಯೇ ಕನ್ನಡ ವಿವಿಯನ್ನು ಉಸಿರುಗಟ್ಟಿಸಿ ಕೊಲ್ಲುವ ಪ್ರಯತ್ನ ನಡೆಸಿದೆ. ಸರಕಾರದ ಈ ಕನ್ನಡ-ಕರ್ನಾಟಕ-ಕನ್ನಡಿಗ ವಿರೋಧಿ ಧೋರಣೆಯನ್ನು ವಿರೋಧಿಸುತ್ತೇನೆ. ಹಾಗೂ ಕೂಡಲೇ ಕನ್ನಡ ವಿವಿಗೆ ಅನುದಾನವನ್ನು ಬಿಡುಗಡೆ ಮಾಡಬೇಕೆಂದೂ, ಹಾಗೂ ಅದರ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಲೇಖಕ, ಚಿಂತಕ ಕೆ.ಫಣಿರಾಜ್, ಕರ್ನಾಟಕವು ಇನ್ನ್ಯಾವ ಅಜ್ಞಾನದ ಪಾತಳ ತಲುಪಲಿದೆಯೋ ಎಂದು ಆತಂಕ ವ್ಯಕ್ತಪಡಿಸಿದ್ದಾರಲ್ಲದೆ, ಇಲ್ಲಿ ಪುಢಾರಿಗಳನ್ನು ಕೋಟಿ ಕೋಟಿಗೆ ಖರೀದಿಸಿ ಸರಕಾರ ರಚಿಸುವ ಮಂದಿ, ಕನ್ನಡದ ಬೊಗಸೆಯಲ್ಲಿ ವಿಶ್ವಾತ್ಮಕ ಗ್ಯಾನ ಪಡೆಯುವ ವಿದ್ಯಾಲಯಕ್ಕೆ ಐದು ಕೋಟಿ ನೀಡಲು ನೆಪ ಹುಡುಕುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ಬಂಗಲೆಗಳಲ್ಲಿ ವಾಸಿಸುವ ಜನ, ಕನ್ನಡದ ಜನರು ತುತ್ತಿಗೆ ತೆತ್ತ ತೆರಿಗೆ ಹಣವನ್ನು ಕನ್ನಡದ ಗ್ಯಾನ ಸಂಸ್ಥೆ ನೀಡಲು ಹಿಂಜರಿಯುವುದು ಚಾರಿತ್ರಿಕ ಅಪರಾಧ! ಕೂಡಲೇ ನಿಗದಿ ಅನುದಾನ ಬಿಡುಗಡೆ ಮಾಡಿ! ನಿಮ್ಮ ಮಾನ ಉಳಿಸಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶರಣ ಸಂಸ್ಕೃತಿ ಚಿಂತಕ, ಹಿರಿಯ ಪತ್ರಕರ್ತ ರಂಜಾನ್ ದರ್ಗಾ, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡುವಲ್ಲಿ ಸರ್ಕಾರ ಉದಾಸೀನ ಭಾವ ಹೊಂದಿರುವುದು ಸಖೇದಾಶ್ಚರ್ಯ ಹುಟ್ಟಿಸುವಂಥದ್ದು. ನಿಜವಾದ ಅರ್ಥದಲ್ಲಿ ಕನ್ನಡ ಭಾಷೆ ಮತ್ತು ಕರ್ನಾಟಕ ಸಂಸ್ಕೃತಿ ಬಗ್ಗೆ ರಾಜ್ಯ ಸರ್ಕಾರ ತೋರಿಸುತ್ತಿರುವ ಅಸಡ್ಡೆಯ ದ್ಯೋತಕ ಇದಾಗಿದೆ. ಸರ್ಕಾರ ಶೀಘ್ರವೇ ತನ್ನ ತಪ್ಪನ್ನು ತಿದ್ದಿಕೊಳ್ಳುತ್ತದೆ ಎಂದು ಆಶಿಸುವೆ. ತಾಡೋಲೆ, ಕೋರಿಕಾಗದ ಮುಂತಾದ ಹಸ್ತಪ್ರತಿಗಳ ಹಾಗೂ ತಾಮ್ರಪಟಗಳ ಡಿಜಿಟಲೀಕರಣ, ಇನ್ನುಳಿದ ಶಾಸನಗಳ ವಿಷಯ ಸಂಗ್ರಹ ಮತ್ತು ಕನ್ನಡದ ಅತ್ಯಮೂಲ್ಯ ಆಸ್ತಿಯಾದ ವಚನ ಸಂಪುಟಗಳಲ್ಲಿನ ದೋಷ ನಿವಾರಣೆ, ಜನಪ್ರಿಯ ಸಂಪುಟಗಳ ಜೊತೆಗೇ ಎಲ್ಲ ಪಾಠಾಂತರಗಳನ್ನು ದಾಖಲಿಸಿ, ಪ್ರಕ್ಷಿಪ್ತ ವಚನಗಳನ್ನು ಪ್ರತ್ಯೇಕ ಭಾಗ ಮಾಡಿ ಪ್ರಕಟಿಸುವಂಥ ವಿದ್ವತ್ ಸಂಪುಟಗಳ ಮುದ್ರಣ, ಹರಪ್ಪಾ ಮೊಹೆಂಜೊದಾರೊವರೆಗೆ ಬೇರುಗಳನ್ನು ಹೊಂದಿರುವ ಕನ್ನಡದ ಶಾಸ್ತ್ರೀಯ ಅಧ್ಯಯನ ಮುಂತಾದ ಮಹತ್ವದ ಕಾರ್ಯಗಳು ನಡೆಯಬೇಕಿದೆ. ಸರ್ಕಾರ ಹಿಂದೆಂದಿಗಿಂತಲೂ ಹೆಚ್ಚಿನ ಅನುದಾನ ಕೊಡುವುದು ಬಿಟ್ಟು ಅನುದಾನ ಕಡಿತಗೊಳಿಸುವ ಸರ್ಕಾರದ ಕ್ರಮ ಖಂಡನೀಯವಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ಗಣ್ಯರ ಹೇಳಿಕೆಗಳು

ʻಬಹುಶಃ ತಮ್ಮ ನೆಲದಲ್ಲಿಯೇ ತಮ್ಮ ಮೂಲಭೂತ ಹಕ್ಕುಗಳನ್ನು ಹೋರಾಟ ಮೂಲಕ ಪಡೆದುಕೊಳ್ಳುವ ದೌರ್ಭಾಗ್ಯ ಕನ್ನಡಿಗರದ್ದು ಅನಿಸುತ್ತೆ. ಅಧಿಕಾರಕ್ಕೆ ಏರಿದ ಸರ್ಕಾರ ಕನ್ನಡ ಹಾಗು ಕನ್ನಡದ ಅಸ್ಮಿತೆಯನ್ನು ಕಡೆಗಣಿಸಿ ಪರಭಾಷೆಯ ಓಲೈಕೆಗೆ ಹೊರಟಿರುವುದು ನೋವಿನ ವಿಷಯ. ಕರ್ನಾಟಕದ ಪ್ರತಿಷ್ಠಿತ ವಿವಿಗೆ ಬರಬೇಕಾದ ಅನುದಾನವನ್ನು ತಡೆಹಿಡಿದಿರುವುದು ಅಸಂಖ್ಯಾತ ಕನ್ನಡದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾಡುತ್ತಿರುವ ದ್ರೋಹ. ಈ ಕೂಡಲೇ ಸರ್ಕಾರ ಇಂಥಹ ಕನ್ನಡ ವಿರೋಧಿ ನಿಲುವನ್ನು ಬಿಟ್ಟು ಅನುದಾನವನ್ನು ಬಿಡುಗಡೆ ಮಾಡಬೇಕು.ʼ
– ಜೋಸ್ಲಿನ್ ರೂಸ್ವೆಲ್ಟ್, ಕನ್ನಡ ಕಾರ್ಯಕರ್ತ

ʻಹಂಪಿ ಕನ್ನಡ ವಿಶ್ವವಿದ್ಯಾಲಯ ಕನ್ನಡದ ಸಂಸ್ಕೃತಿಗೆ, ಭಾಷೆಗೆ ಕಿರೀಟಪ್ರಾಯವಿದ್ದಂತೆ. ಸಂಶೋಧನೆಗೆ, ಕನ್ನಡದ ವಿದ್ಯಾರ್ಜನೆಗೆ, ಲಿಪಿಗೆ, ಕನ್ನಡದ ಅಧ್ಯಯನಕ್ಕೆ ಇರುವ ವಿಶ್ವದ ಏಕೈಕ ವಿಶ್ವವಿದ್ಯಾಲಯ. ಕರ್ನಾಟಕದ ವಿವಿಧ ಅಧ್ಯಯನದ ಸುಮಾರು ೮೦ಕ್ಕಿಂತ ಹೆಚ್ಚು ಪುಸ್ತಕಗಳನ್ನು ಹೊರತಂದ ಹೆಗ್ಗಳಿಕೆ ಇದಕ್ಕಿದೆ. ಸುಮಾರು 45 ಡಾಕ್ಟರೇಟ್ ಪದವಿಗಳನ್ನು ನೀಡಿದ ಹೆಸರು ಇದಕ್ಕಿದೆ. ಸುಮಾರು 80 ಎಂಫಿಲ್ ಪದವಿಗಳನ್ನು ಈ ವಿಶ್ವವಿದ್ಯಾಲಯ ನೀಡಿದೆ. ಈ ರೀತಿಯ ವಿವಿ ರದ್ದಾಗುವಂಥದ್ದು ಕರ್ನಾಟಕಕ್ಕೆ ಮಾಡುವ ಅವಮಾನವೇ. ಕರ್ನಾಟಕವನ್ನು, ಕನ್ನಡವನ್ನು ಕಟ್ಟಿ ಬೆಳೆಸಬೇಕಾದವರೇ ಅದರ ಅವನತಿಗೆ ಕಂಕಣಬದ್ಧರಾಗಿರುವಂಥದ್ದು ಶೋಚನೀಯ ಸಂಗತಿ. ಈ ವಿಶ್ವವಿದ್ಯಾಲಯಕ್ಕೆ ಅನುದಾನ ಮುಂದುವರೆಸಿ ಕನ್ನಡ ಭಾಷೆ ಸಂಸ್ಕೃತಿ ಮತ್ತು ಅಧ್ಯಯನವನ್ನು ಉಳಿಸಲು ಒತ್ತಾಯಿಸುತ್ತೇವೆ.ʼ
-ವಂ. ಸ್ವಾಮಿ ಫಾ.ಬರ್ತಲೋಮಿಯಾ, ಸಂತ ಅಂತೋಣಿಯವರ ದೇವಾಲಯ, ಉತ್ತರಹಳ್ಳಿ

ʻಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಪಂಚದಲ್ಲಿ ಭಾಷೆಗಾಗಿಯೇ ಇರುವ ಏಕೈಕ ವಿಶ್ವವಿದ್ಯಾಲಯ. ಕೇವಲ ವಿದ್ಯೆಯನ್ನು ನೀಡುವುದಕ್ಕೆ ಸೀಮಿತವಾಗದೆ, ಜ್ಞಾನವನ್ನು ಕಟ್ಟುವ ಕೇಂದ್ರವಾಗುವತ್ತ ಬೆಳೆದು ಬಂದಿದೆ. ಕನ್ನಡ ನುಡಿ ಮತ್ತು ಸಾಹಿತ್ಯದಲ್ಲಿ ಜ್ಞಾನವನ್ನು ಕಟ್ಟುವುದು, ಸಂಶೋಧನೆಗಳನ್ನು ನಡೆಸುವುದು ಮತ್ತು ಸಾಂಸ್ಕೃತಿಕ ಅವಶ್ಯಕತೆಗಳನ್ನು ಪೂರೈಸುವುದು ನಾಡು ಕಟ್ಟುವ ಕೆಲಸದ ಭಾಗ. ಇಂತಹ ಕಾರ್ಯಗಳನ್ನು ಹಂಪಿ ವಿಶ್ವವಿದ್ಯಾಲಯ ಮಾಡಿಕೊಂಡು ಬಂದಿದೆ. ಈಗ ಹಣಕಾಸಿನ ನೆಪವೊಡ್ಡಿ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನಗಳನ್ನು ನೀಡದಿರುವುದು ನಾಡು ಕಟ್ಟುವ ಕೆಲಸಕ್ಕೇ ಕೊಡಲಿಪೆಟ್ಟು ಹಾಕಿದಂತೆ. ಜಾತಿಗೊಂದರAತೆ ನಿಗಮ ಮಂಡಳಿ, ಪ್ರಾಧಿಕಾರಗಳನ್ನು ಸ್ಥಾಪಿಸಲು ಹಣವಿರುವುದಾದರೆ ನಾಡುಕಟ್ಟುವ ವಿಶ್ವವಿದ್ಯಾಲಯಗಳನ್ನು ಉಳಿಸಿಕೊಳ್ಳಲು ಸರಕಾರದ ಬಳಿ ಹಣವಿಲ್ಲವೇ? ಕನ್ನಡ-ಕರ್ನಾಟಕದ ಬಗೆಗಿನ ಇಂತಹ ಅಸಡ್ಡೆ ಸಲ್ಲದು. ಸರಕಾರ ಆದಷ್ಟು ಬೇಗ ಅಗತ್ಯ ಅನುದಾನಗಳನ್ನು ಬಿಡುಗಡೆ ಮಾಡಲಿ.ʼ
– ಶ್ರುತಿ ಎಚ್.ಎಂ., ಕನ್ನಡಪರ ಚಿಂತಕಿ

ʻಕನ್ನಡದ ಭಾಷೆ, ಸಾಹಿತ್ಯ, ಸಂಸ್ಕೃತಿ, ಜನಪದ ಪರಂಪರೆ, ಐತಿಹಾಸಿಕ ಹಾಗೂ ಸಾಮಾಜಿಕ ಮತ್ತು ಸಮುದಾಯಗಳ ಚರಿತ್ರೆಗಳ ಇತಿಹಾಸವನ್ನು ತನ್ನ ಕಲಾ ಪ್ರದರ್ಶನಗಳ ಮೂಲಕ ಮನೆಮನೆಗೆ ಪರಿಚಯಿಸಿ ಉಳಿಸಿ ಬೆಳೆಸುವಲ್ಲಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ನಾಡೋಜ ಬುರ್ರಕಥಾ ದರೋಜಿ ಈರಮ್ಮ, ನಾಡೋಜ ಬೆಳಗಲ್ ವೀರಣ್ಣ, ನಾಡೋಜ ಸುಕ್ರಿ ಬೊಮ್ಮಗೌಡ, ನಾಡೋಜ ಸಿರಿ ಅಜ್ಜಿ ಹಾಗೂ ಇಂತಹ ಅಲೆಮಾರಿ ಬುಡಕಟ್ಟು ಸಮುದಾಯಗಳ ದೈತ್ಯ ಪ್ರತಿಭೆಗಳನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರಿದೆ. ಇಂತಹ ಚಾರಿತ್ರಿಕತೆ ಹೊಂದಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರವು ಹೆಚ್ಚು ಹೆಚ್ಚು ಅನುದಾನ ನೀಡಿ ಕನ್ನಡದ ಅಸ್ಮಿತೆಗಾಗಿ ಉಳಿಸಿಕೊಳ್ಳಬೇಕಿದೆ.ʼ
-ಡಾ. ಅಶ್ವರಾಮು, ಅಧ್ಯಕ್ಷರು, ನಾಡೋಜ ಬುರ್ರಕಥಾ ದರೋಜಿ ಈರಮ್ಮ ಫೌಂಡೇಶನ್, ಬಳ್ಳಾರಿ

ʻಕನ್ನಡ ಸಾಹಿತ್ಯದ ಕಿರೀಟದಂತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ನಮ್ಮ ನಾಡು-ನುಡಿ-ಸಂಸ್ಕೃತಿಯ ರಾಯಭಾರಿಯಂತೆ ಕನ್ನಡ ಕೈಂಕರ್ಯ ಮಾಡುತ್ತಿದೆ. ಸರ್ಕಾರ ಹಂಪಿ ವಿಶ್ವವಿದ್ಯಾಲಯಕ್ಕೆ ಅನುದಾನ ಸ್ಥಗಿತಗೊಳಿಸಿರುವುದು ಕನ್ನಡ ಭಾಷೆಗೆ ಮಾಡಿದ ಬಹುದೊಡ್ಡ ಅಪಮಾನವಾಗಿದೆ. ಸ್ವಾಭಿಮಾನಿ ಕನ್ನಡಿಗರು ಬೀದಿಗಿಳಿದು ಧ್ವನಿ ಎತ್ತುವ ಮೊದಲು ಸರಕಾರ ಎಚ್ಚೆತ್ತು, ಈ ಕೂಡಲೆ ಅದಕ್ಕೆ ನೀಡಬೇಕಾದ ಅನುದಾನವನ್ನು ಒದಗಿಸಬೇಕು. ಇಲ್ಲದೇ ಹೋದರೆ ಗೋಕಾಕ್ ಚಳವಳಿಯ ಮಾದರಿಯಲ್ಲಿ ಉಗ್ರ ಹೋರಾಟ ಪ್ರಾರಂಭಿಸಬೇಕಾಗುತ್ತದೆ.ʼ
– ಮ.ನಿ.ಪ್ರ ಶಾಂತಲಿಂಗ ಸ್ವಾಮೀಜಿ, ದೊರೆಸ್ವಾಮಿ ವಿರಕ್ತಮಠ, ಭೈರನಹಟ್ಟಿ

ʻಜಾತಿ, ಧರ್ಮಗಳ ಪ್ರಾಧಿಕಾರಕ್ಕೆ ಕೊಡುತ್ತಿರುವ ಉದಾರ ಹಣ ಕನ್ನಡ ವಿಶ್ವವಿದ್ಯಾಲಯಕ್ಕೆ ಯಾಕಿಲ್ಲ? ಇದರಿಂದ ಸರ್ಕಾರದ ಕನ್ನಡ ವಿರೋಧಿ ನಿಲುವು ಸ್ಪಷ್ಟ. ಸರ್ಕಾರದ ಕನ್ನಡ ವಿರೋಧಿ ನೀತಿ ವಿರುದ್ಧ ಹೋರಾಟದ ಕುಲುಮೆಯ ಬೆಂಕಿ ಮತ್ತಷ್ಟು ತೀವ್ರಗೊಳ್ಳಲಿ ಅದರಿಂದ ಮತ್ತಷ್ಟು ಅಸ್ತ್ರಗಳು ಹೊರಹೊಮ್ಮಲಿ, ಕನಿಷ್ಟ ಪ್ರಜ್ಞೆ ಇಲ್ಲದ ಸರಕಾರವನ್ನು ಎಚ್ಚರಿಸಲಿ ಮತ್ತದರ ನಿಲುವನ್ನು ಬದಲಾಯಿಸಲಿ. ಮುಂದಿರುವ ಅಪಾಯವನ್ನು ಅರಿತು ಸರ್ಕಾರ ಕರ್ನಾಟಕದ ಅನೇಕ ಜಿಲ್ಲೆಗಳ ಬಡ ವಿದ್ಯಾರ್ಥಿಗಳು ಓದುತ್ತಿರುವ ಕನ್ನಡ ವಿವಿಗೆ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಲಿ.ʼ
– ಹನುಮೇಶ ಕವಿತಾಳ, ವಕೀಲರು

ʻಕನ್ನಡತನ ಕಟ್ಟುವ ನಿಟ್ಟಿನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಅಪಾರ ಕಾರ್ಯ ಸೇವೆ ಸಲ್ಲಿಸಿದೆ. ಈಗ ಕನ್ನಡ ವಿವಿಗೆ ಹಣಕಾಸಿನ ಮುಗ್ಗಟ್ಟು ಸೃಷ್ಟಿಯಾಗಿರೋದು ಕನ್ನಡಿಗರಾದ ನಾವೆಲ್ಲರೂ ತಲೆ ತಗ್ಗಿಸುವಂತಹ ವಿಚಾರ. ಬೇರೆಬೇರೆ ನಿಗಮ ಮಂಡಳಿ ಮಾಡಿ ಕೋಟಿ ಕೋಟಿ ಹಣನೀಡಲು ತುದಿಗಾಲಲ್ಲಿ ನಿಂತಿರುವ ಕರ್ನಾಟಕ ಸರ್ಕಾರ ಬೇಗ ಕನ್ನಡ ವಿವಿಗೆ ಅಕ್ಷಯವಾಗುವಷ್ಟು ಅನುದಾನ ನೀಡಿ ತನ್ನ ಘನತೆ ಉಳಿಸಿಕೊಳ್ಳಲಿ.ʼ
-ಲಕ್ಷ್ಮಿರಾಮ್, ಜಾನಪದ ಗಾಯಕರು ಮತ್ತು ಸಂಸ್ಕೃತಿ ಚಿಂತಕರು, ಮೈಸೂರು

ʻಜಾತಿಗೊಂದು ಪ್ರಾಧಿಕಾರ ರಚಿಸಿ ಅನುದಾನ ಬಿಡುಗಡೆ ಮಾಡುವುದರಲ್ಲಿ ನಿರತವಾಗಿರುವ ಸರಕಾರ, ನಿರಂತರ ಕನ್ನಡ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಕನ್ನಡ ವಿವಿಗೆ ಅನುದಾನ ಬಿಡುಗಡೆ ಮಾಡದೆ ನೂರಾರು ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದೆ. ದೇಶದ ಇತಿಹಾಸ ತಿರುಚುವಲ್ಲಿ ಮಗ್ನರಾಗಿರುವ ಕೋಮುವಾದಿ ಶಕ್ತಿಗಳಿಗೆ ಕನ್ನಡ ಸಂಶೋಧನೆ ಹೆಚ್ಚಾದಷ್ಟು ಇಲ್ಲಿ ಸೌಹಾರ್ದ ಪರಂಪರೆಯೊಂದು ತೆರೆದುಕೊಳ್ಳುವ ಭೀತಿ ಆವರಿಸಿದೆ. ಹೀಗಾಗಿಯೇ ಕನ್ನಡ ವಿವಿಗೆ ಅನುದಾನ ತಡೆದಿರುವುದು ನಿಚ್ಚಳ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಹೆಚ್ಚು ಸಂಶೋಧನೆಗೆ ಒಳಪಟ್ಟರೆ ತಮಗೆ ಉಳಿಗಾಲವಿಲ್ಲ ಎಂದು ಅರಿತಿರುವ ಅವರು ಉದ್ದೇಶಪೂರ್ವಕವಾಗಿಯೇ ಕನ್ನಡ ವಿವಿಗೆ ಅನುದಾನ ತಡೆಹಿಡಿದಿದ್ದಾರೆ. ಸರ್ಕಾರದ ಈ ಒಳಗುಟ್ಟು ರಟ್ಟುಮಾಡಿ ಕನ್ನಡ ವಿವಿ ಉಳಿವಿಗೆ ಅಭಿಯಾನ ನಡೆಸುತ್ತಿರುವ ಕರವೇ ಕಾಳಜಿ ಅಪೂರ್ವ. ಈ ಅರ್ಥಪೂರ್ಣ ಚಳವಳಿಯನ್ನು ಹಮ್ಮಿಕೊಂಡಿರುವ ಸಂಘಟನೆಯ ನಾಯಕರ ಹೆಗಲಿಗೆ ಹೆಗಲು ಕೊಡುವುದು ಪ್ರಜ್ಞಾವಂತ ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ.ʼ
– ಸರಳಾ ಸಾತ್ಪುತೆ, ಪತ್ರಕರ್ತೆ

× Chat with us