BREAKING NEWS

ನಮೀಬಿಯಾದಿಂದ ತರಲಾಗಿದ್ದ ಹೆಣ್ಣು ಚೀತಾ ‘ಸಾಶಾ’ ಸಾವು

ಭೋಪಾಲ್‌ : ಕಳೆದ ವರ್ಷ ನಮೀಬಿಯಾದಿಂದ ತರಲಾದ 8 ಚೀತಾಗಳ ಪೈಕಿ ಒಂದು ಹೆಣ್ಣು ಚೀತಾ ಸೋಮವಾರ ಮೃತಪಟ್ಟಿದೆ. ಮೃತ ಚೀತಾ ‘ಸಾಶಾ’ ಕಳೆದ ಜನವರಿಯಿಂದಲೂ ಮೂತ್ರಪಿಂಡಕ್ಕೆ ಸಂಬಂಧಿತ ಸೋಂಕಿನಿಂದ ಬಳಲುತ್ತಿತ್ತು. ಅಂದಿನಿಂದಲೂ ಚೀತಾವನ್ನು ತೀವ್ರ ವೈದ್ಯಕೀಯ ನಿಗಾದಲ್ಲಿ ಇಡಲಾಗಿತ್ತು. ಉಳಿದ ಚೀತಾಗಳು ಆರೋಗ್ಯವಾಗಿವೆ ಎಂದು ಕುನೊ ರಾಷ್ಟ್ರೀಯ ಅಭಯಾರಣ್ಯವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಚೀತಾ ಸಂತತಿ ಅವಸಾನ ಕಂಡಿದ್ದವು. ದೇಶದಲ್ಲಿ ಮತ್ತೆ ಚೀತಾ ಸಂತತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಚೀತಾಗಳನ್ನು ಮರುಪರಿಚಯಿಸುವ ಕಾರ್ಯಕ್ರಮವನ್ನು ರೂಪಿಸಿತ್ತು. ಅದರಂತೆ ನಮೀಬಿಯಾದಿಂದ ಒಟ್ಟು 8 ಚೀತಾಗಳನ್ನು ತಂದು ಮಧ್ಯಪ್ರದೇಶದ ಕುನೊ ನ್ಯಾಷನಲ್‌ ಪಾರ್ಕ್‌ಗೆ ಬಿಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಸೆಪ್ಟೆಂಬರ್‌ನಲ್ಲಿ ಈ ಚೀತಾಗಳನ್ನು ಅರಣ್ಯಕ್ಕೆ ಸೇರ್ಪಡೆ ಮಾಡಲಾಗಿತ್ತು.

ಸಾಶಾ ಚೀತಾದ ದೈನಂದಿನ ನಿಗಾವಣೆ ಪರೀಕ್ಷೆ ಹಾಗೂ ವೈದ್ಯಕೀಯ ತಪಾಸಣೆ ವೇಳೆ ಅದರಲ್ಲಿ ಆಯಾಸ ಹಾಗೂ ಬಲಹೀನತೆ ಕಂಡುಬಂದಿತ್ತು. ಆಕೆಯಲ್ಲಿ ನಿರ್ಜಲೀಕರಣ ಉಂಟಾಗಿದ್ದು, ಮೂತ್ರಪಿಂಡ ಸಂಬಂಧಿ ಸಮಸ್ಯೆ ಇರುವುದು ಪತ್ತೆಯಾಗಿತ್ತು. ರಕ್ತ ಪರೀಕ್ಷೆ ನಡೆಸಿದಾಗ ಅದರ ಕ್ರಿಯಾಟಿನ್ ಮಟ್ಟಗಳು ಬಹಳ ಅಧಿಕವಾಗಿದ್ದು, ಮೂತ್ರಪಿಂಡದಲ್ಲಿನ ಸೋಂಕನ್ನು ದೃಢಪಡಿಸಿತ್ತು. ಉದ್ಯಾನದಲ್ಲಿರುವ ಇತರೆ ಚೀತಾಗಳು ಆರೋಗ್ಯಯುತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸೆ. 17ರಂದು ಪ್ರಧಾನಿ ಮೋದಿ ಅವರ ಜನ್ಮದಿನದಂದು ಕುನೋ ಅರಣ್ಯಕ್ಕೆ ಸೇರ್ಪಡೆಗೊಳಿಸಿದ 5 ವರ್ಷದ ಎರಡು ಚೀತಾಗಳಲ್ಲಿ ಸಾಶಾ ಕೂಡ ಒಂದು.

ಕಾಡಿಗೆ ಸೇರಿದ ಎಂಟು ಚೀತಾಗಳು : ಚೀತಾಗಳು ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವ ಬಗ್ಗೆ ಹಲವು ವನ್ಯಜೀವಿ ತಜ್ಞರು ಮೊದಲಿನಿಂದಲೂ ಅನುಮಾನ ವ್ಯಕ್ತಪಡಿಸಿದ್ದರು. ಅವುಗಳನ್ನು ಕೆಲವು ತಿಂಗಳವರೆಗೆ ಕ್ವಾರೆಂಟೈನ್‌ನಲ್ಲಿ ಇರಿಸಿ, ಅವುಗಳ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿತ್ತು. ನಂತರ ಅವುಗಳನ್ನು ಅರಣ್ಯಕ್ಕೆ ಬಿಡುವ ಮೂಲಕ ಅವು ಇಲ್ಲಿ ಸಹಜವಾಗಿ ಬೇಟೆಯಾಡಿ ಜೀವಿಸುವಂತೆ ಕ್ರಮ ಕೈಗೊಳ್ಳಲಾಗಿತ್ತು. ಕಳೆದ ವಾರ ಇನ್ನೂ ಎರಡು ಚೀತಾಗಳಾದ ಎಲ್ಟನ್‌ ಮತ್ತು ಫ್ರೆಡ್ಡಿಯನ್ನು ಮಧ್ಯಪ್ರದೇಶದ ಕಾಡಿಗೆ ಬಿಡಲಾಗಿತ್ತು. ಅದರೊಂದಿಗೆ, ನಮೀಬಿಯಾದಿಂದ ತರಲಾದ ಎಂಟು ಚಿರತೆಗಳ ಪೈಕಿ ನಾಲ್ಕನ್ನು ಶಿಯೋಪುರ್‌ ಜಿಲ್ಲೆಯ ಉದ್ಯಾನವನದಲ್ಲಿ ಕಾಡಿಗೆ ಬಿಡಲಾಗಿದೆ.ಫೆಬ್ರವರಿ 18ರಂದು ದಕ್ಷಿಣ ಆಫ್ರಿಕಾದಿಂದಲೂ 12 ಚೀತಾಗಳನ್ನು ತಂದು ಕುನೊ ಅಭಯಾರಣ್ಯಕ್ಕೆ ಬಿಡಲಾಗಿದೆ. ಈ ಪೈಕಿ 7 ಗಂಡು ಹಾಗೂ ಐದು ಹೆಣ್ಣು ಚೀತಾಗಳಿವೆ. ಕುನೊ ನ್ಯಾಷನಲ್‌ ಪಾರ್ಕ್‌ನಲ್ಲಿ ಸದ್ಯ ಒಟ್ಟು 19 ಚೀತಾಗಳಿವೆ.

ಸೌದಿ ರಾಜಕುಮಾರ ನೀಡಿದ್ದ ಚೀತಾ ಸಾವು : ಹೈದರಾಬಾದ್: ಸೌದಿ ರಾಜಕುಮಾರ ಬಂದಾರ್ ಬಿನ್ ಸೌದ್ ಬಿನ್ ಮೊಹಮ್ಮದ್ ಅಲ್ ಸೌದ್ ಅವರು ಸುಮಾರು ಒಂದು ದಶಕದ ಹಿಂದೆ ಉಡುಗೊರೆಯಾಗಿ ನೀಡಿದ್ದ ಚೀತಾ, ಹೈದರಾಬಾದ್‌ನ ನೆಹರೂ ಮೃಗಾಲಯದಲ್ಲಿ ಹೃದಯಾಘಾತದಿಂದ ಶುಕ್ರವಾರ ಮೃತಪಟ್ಟಿತ್ತು.
15 ವರ್ಷದ ಗಂಡು ಚೀತಾ ಅಬ್ದುಲ್ಲಾಗೆ ಆಹಾರ ತಿನ್ನಲು ಕರೆದಾಗ ಅದು ಪ್ರತಿಕ್ರಿಯೆ ನೀಡಿರಲಿಲ್ಲ. ಸಾಮಾನ್ಯವಾಗಿ ಹೆಸರು ಕರೆದಾಗ ಓಡಿ ಬರುವ ಚೀತಾ ಎಲ್ಲಿಯೂ ಕಾಣಿಸಿರಲಿಲ್ಲ. ಬಳಿಕ ಒಳಗೆ ಪ್ರವೇಶಿಸಿದ ಸಿಬ್ಬಂದಿ, ಮರವೊಂದರ ಸಮೀಪದ ಚೀತಾ ಮೃತಪಟ್ಟಿರುವುದನ್ನು ಕಂಡಿದ್ದರು.

2012ರಲ್ಲಿ ಹೈದರಾಬಾದ್ ಪ್ರವಾಸದ ವೇಳೆ ಸೌದಿ ರಾಜಕುಮಾರ, ಮೃಗಾಲಯಕ್ಕೆ ಎರಡು ಜೋಡಿ ಚೀತಾ ಹಾಗೂ ಎರಡು ಜೋಡಿ ಆಫ್ರಿಕಾ ಸಿಂಹಗಳನ್ನು ಉಡುಗೊರೆಯಾಗಿ ನೀಡಿದ್ದರು. ಎಂಟು ವರ್ಷದ ಹಿಬಾ ಎಂಬ ಹೆಣ್ಣು ಚೀತಾ 2020ರಲ್ಲಿ ದೀರ್ಘ ಕಾಲದ ಅನಾರೋಗ್ಯದ ಬಳಿಕ ಮೃತಪಟ್ಟಿತ್ತು. ಈಗ ಉಳಿದಿದ್ದ ಏಕೈಕ ಚೀತಾ ಕೂಡ ಸಾವಿಗೀಡಾಗಿದೆ.

lokesh

Recent Posts

ಪಶ್ಚಿಮ ಏಷ್ಯಾದಲ್ಲಿ ಹೆಚ್ಚಾದ ಉದ್ವಿಗ್ನತೆ: ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದಿಷ್ಟು.!

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಂತೆ ಭಾರತೀಯ ನಾಗರಿಕರು ಒಗ್ಗಟ್ಟಾಗಿರುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಪ್ರಧಾನಿ ನರೇಂದ್ರ…

15 mins ago

ಆರೋಗ್ಯ ಕೇಂದ್ರದ ಮುಂಭಾಗವೇ ವಾಹನಗಳ ಪಾರ್ಕಿಂಗ್:‌ ಸಾರ್ವಜನಿಕರಿಗೆ ಕಿರಿಕಿರಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದ…

27 mins ago

ಹನೂರು: ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ನಿವಾಸಿಗಳಿಂದ ಪ್ರತಿಭಟನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೋವಿ ಸಮುದಾಯದ ಕಾಲೋನಿಗೆ…

34 mins ago

ನ್ಯಾಯ ವಿತರಣೆಯಲ್ಲಿ ಪೊಲೀಸರು ರಾಜಿಯಾಗಬಾರದು: ಸಿಎಂ ಸಿದ್ದರಾಮಯ್ಯ

ಮೈಸೂರು: ನ್ಯಾಯ ವಿತರಣೆಯಲ್ಲಿ ಪೊಲೀಸರು ರಾಜಿಯಾಗಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರು ಘಟಕದ 46ನೇ ತಂಡದ ಸಿವಿಲ್‌ ಪೊಲೀಸ್‌…

1 hour ago

ಅಮೇರಿಕಾದಲ್ಲಿ ಡೊನಾಲ್ಡ್‌ ಟ್ರಂಪ್‌ ವಿರುದ್ಧವೇ ಭುಗಿಲೆದ್ದ ಆಕ್ರೋಶ

ಅಮೇರಿಕಾದಲ್ಲಿ ಡೊನಾಲ್ಡ್‌ ಟ್ರಂಪ್‌ ವಿರುದ್ಧವೇ ಭುಗಿಲೆದ್ದ ಆಕ್ರೋಶ 80 ಲಕ್ಷ ಜನರಿಂದ ನೋ ಕಿಂಗ್ಸ್‌ ಚಳುವಳಿ ಟ್ರಂಪ್‌ ನೀತಿ ವಿರೋಧಿಸಿ…

1 hour ago

ರಸ್ತೆ ಇಕ್ಕೆಲಗಳ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

೫೦ ಜೆಸಿಬಿ, ೩೦ ಟಿಪ್ಪರ್‌ಗಳು, ೮ ಟ್ರಾಕ್ಟರ್‌ಗಳು, ೫೦೦ ಮಂದಿ ಪೌರಕಾರ್ಮಿಕರು ಭಾಗಿ ಮೈಸೂರು: ನಗರದ ಹೊರ ವರ್ತುಲ ರಸ್ತೆಯಲ್ಲಿ…

2 hours ago