ರಾಮನಗರ: ವೇಶ್ಯಾವಾಟಿಕೆ, ಅಕ್ರಮ ವರ್ಗಾವಣೆ ದಂಧೆ ಆರೋಪಕ್ಕೆ ಸಂಬಂಧಿಸಿ ಸ್ಯಾಂಟ್ರೋ ರವಿಗಾಗಿ ಹುಡುಕುತ್ತಿರುವ ವಿಶೇಷ ಪೊಲೀಸ್ ತಂಡ ಗುರುವಾರ ಕಾರು ಚಾಲಕನನ್ನು ವಶಕ್ಕೆ ಪಡೆದಿದೆ. ಆದರೆ ರಾಮನಗರ ಭಾಗದಲ್ಲಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಅಲ್ಲಿಂದ ಪರಾರಿಯಾಗಿದ್ದಾನೆಂದು ಹೇಳಲಾಗಿದೆ.
ರಾಮನಗರದಲ್ಲಿ ಎಸ್.ಪಿ ಸಂತೋಷ್ ಬಾಬು ನೇತೃತ್ವದ ತಂಡ ಸ್ಯಾಂಟ್ರೋ ರವಿ ಕಾರು ಚಾಲಕ ಗಿರೀಶ್ ನನ್ನು ವಶಕ್ಕೆ ಪಡೆದಿದೆ. ರಾಮನಗರದಲ್ಲಿ ಸ್ಯಾಂಟ್ರೋ ರವಿ 2 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಎನ್ನುವ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಮೈಸೂರಿನಿಂದ ಬಂದಿದ್ದ ಪೊಲೀಸರು ರಾಮನಗರ ಪೊಲೀಸರ ಸಹಾಯದಿಂದ ರವಿ ಕಾರು ಚಾಲಕ ಗಿರೀಶ್ ನನ್ನು ವಶಕ್ಕೆ ಪಡೆದಿದ್ದಾರೆ.
“ಸ್ಯಾಂಟ್ರೋ ರವಿ ರಾಮನಗರ ಭಾಗದಲ್ಲಿ ತಲೆ ಮರೆಸಿಕೊಂಡಿರುವ ಗುಮಾನಿ ಇದೆ ಹಾಗಾಗಿ ರಾಮನಗರದಲ್ಲೂ ಪೋಲಿಸ್ ತಂಡ ರಚನೆ ಮಾಡಲಾಗಿದೆ” ಎಂದು ಎಸ್.ಪಿ ಸಂತೋಷ್ ಬಾಬು ತಿಳಿಸಿದ್ದಾರೆ.
ರಾಮನಗರ ಹೋಟೆಲ್, ರೆಸಾರ್ಟ್ಗಳಲ್ಲಿ ಸ್ಯಾಂಟ್ರೊ ರವಿ ಇರಬಹುದು ಎಂಬ ಗುಮಾನಿ ಇದೆ. ಆದ್ದರಿಂದ ಜಿಲ್ಲಾ ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದಾರೆ. ಮಹಿಳೆಗೆ ಕಿರುಕುಳ, ಪೊಲೀಸ್ ಇಲಾಖೆಯಲ್ಲಿನ ವರ್ಗಾವಣೆ ದಂಧೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸ್ಯಾಂಟ್ರೊ ರವಿ ಹೆಸರು ಕೇಳಿ ಬಂದಿದೆ. ಪೊಲೀಸರು ವಿಚಾರಣೆಗೆ ಬರುವಂತೆ ಕರೆದಾಗ ಅವರಿಗೆ ಪೋನ್ ಮೂಲಕ ಸ್ಯಾಂಟ್ರೊ ರವಿ ಅವಾಜ್ ಹಾಕಿದ್ದ. ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.