ಖಾಸಗಿ ಕೋವಿಡ್‌ ಆರೈಕೆ ಕೇಂದ್ರಗಳನ್ನು ಮುಚ್ಚುವುದು ಸರಿಯಲ್ಲ: ಸಾ.ರಾ.ಮಹೇಶ್‌

ಮೈಸೂರು: ನಗರದಲ್ಲಿ ಖಾಸಗಿ ಕೋವಿಡ್‌ ಆರೈಕೆ ಕೇಂದ್ರಗಳನ್ನು ಮುಚ್ಚುವ ಕ್ರಮ ಸರಿಯಲ್ಲ ಎಂದು ಶಾಸಕ ಸಾ.ರಾ.ಮಹೇಶ್‌ ಆಕ್ಷೇಪ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ ಟಾಸ್ಕ್‌ ಫೋರ್ಸ್‌ ಸಮಿತಿ ಸದಸ್ಯರು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಕೆಲ ಆಸ್ಪತ್ರೆಗಳ ಅವ್ಯವಸ್ಥೆ ಕಂಡು ಸಂಪೂರ್ಣ ಖಾಸಗಿ ಆಸ್ಪತ್ರೆಗಳ ಅನುಮತಿ ರದ್ದು ಮಾಡಿದ್ದಾರೆ. ಸರ್ಕಾರವೇ ಖಾಸಗಿಯವರಿಗೆ ಕೋವಿಡ್ ಆರೈಕೆ ಕೇಂದ್ರ ತೆರೆಯಿರಿ ಎನ್ನುತ್ತಿದೆ. ಆದರೆ, ಮೈಸೂರಿನಲ್ಲಿ ಕೇಂದ್ರಗಳನ್ನು ಮುಚ್ಚಿಸಲಾಗುತ್ತಿದೆ. ಅವ್ಯವಸ್ಥೆ ಇರುವ ಆಸ್ಪತ್ರೆಗಳನ್ನು ಬೇಕಾದರೆ ಮುಚ್ಚಲಿ. ಆದರೆ, ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಮುಚ್ಚುಚುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಈ ಬಗ್ಗೆ ಆತುರದ ತೀರ್ಮಾನ ತೆಗೆದುಕೊಂಡಿರುವ ಎಸ್.ಎ.ರಾಮದಾಸ್‌ ಅವರು ಬೇಕಿದ್ದರೆ ತಮ್ಮ ಕೆ.ಆರ್.ಕ್ಷೇತ್ರದ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಿಸಲಿ. ಆದರೆ, ಜಿಲ್ಲೆಯ ಎಲ್ಲಾ ಖಾಸಗಿ ಕೋವಿಡ್ ಕೇರ್ ಅನುಮತಿ ರದ್ದುಗೊಳಿಸಲು ಅವರಿಗೆ ಯಾವ ಅಧಿಕಾರ ಇದೆ? ರಾಮದಾಸ್ ಅವರು ಮುಂದೆ ಸಚಿವರಾಗಬಹುದು ಅಂದುಕೊಂಡಿದ್ದೆವು. ಈಗಲೇ ಸಚಿವರಾಗಿ ಬಿಟ್ಟಿದ್ದಾರಾ? ನಗರದ 16 ಖಾಸಗಿ ಕೋವಿಡ್ ಆರೈಕೆ ಕೇಂದ್ರಗಳ ಅನುಮತಿ ರದ್ದುಗೊಳಿಸಿದ್ದಾರೆ ಎಂದು ಕಿಡಿಕಾರಿದರು.

ಎಸ್.ಎ.ರಾಮ್‌ದಾಸ್ ಅಧಿಕಾರ ವ್ಯಾಪ್ತಿ ಮೀರಿ ಆದೇಶ ಮಾಡಿದ್ದಾರೆ. ರಾಮದಾಸ್ ಅವರು ತಮ್ಮನ್ನೇ ಉಸ್ತುವಾರಿ ಸಚಿವರು ಎಂದುಕೊಂಡಂತಿದೆ. ಮೈಸೂರು ಜಿಲ್ಲೆಯಲ್ಲಿ ಏನು ಆಗುತ್ತಿದೆ ಅಂತ ಗೊತ್ತಾಗುತ್ತಿಲ್ಲ. ಏಕಾಏಕಿ ಎಲ್ಲಾ ಖಾಸಗಿ ಕೋವಿಡ್ ಆರೈಕೆ ಕೇಂದ್ರಗಳನ್ನು ಮುಚ್ಚಲಾಗಿದೆ. ಅಲ್ಲಿನ ರೋಗಿಗಳು ಏನು ಮಾಡಬೇಕು ಎಂದು ವಾಗ್ದಾಳಿ ನಡೆಸಿದರು.

× Chat with us