ಮೈಸೂರಿನಲ್ಲಿ ಗ್ಯಾಂಗ್‌ರೇಪ್: ಶಾಸಕ ರಾಮದಾಸ್‌ ಪ್ರತಿಕ್ರಿಯೆ ಏನು?

ಮೈಸೂರು: ಅಪರಾಧ ಪ್ರಕರಣಗಳ ಬಗ್ಗೆ ಪೊಲೀಸರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಶಾಸಕ ಎಸ್‌.ಎ.ರಾಮದಾಸ್‌ ಹೇಳಿದರು.

ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಫ್ತಿಯಲ್ಲಿ ಓಡಾಡುವ ಪೊಲೀಸರು ಮಾಹಿತಿ ಸಂಗ್ರಹಿಸುವುದು, ಅಪರಾಧಗಳ ಕುರಿತು ಮುಂದಾಲೋಚಿಸುವ ಕ್ರಮ ಅನುಸರಿಸಬೇಕು ಎಂದು ಸಲಹೆ ನೀಡಿದರು.

ನಗರದಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳನ್ನು ಮನಗಂಡು, ಪ್ರತಿ ಪೊಲೀಸ್‌ ಠಾಣೆಯಲ್ಲಿ ತಿಂಗಳಿಗೆ ಒಂದು ದಿನ ಜನಸ್ನೇಹಿ ಪೊಲೀಸ್‌ ವಾತಾವರಣ ಸೃಷ್ಟಿಸುವ ಕೆಲಸ ಮಾಡಲಾಗುವುದು. ಇದನ್ನು ಸೆಪ್ಟೆಂಬರ್‌ ತಿಂಗಳಿಂದ ಆರಂಭಿಸಲಾಗುವುದು ಎಂದು ತಿಳಿಸಿದರು.

ನಿರ್ಜನ ಪ್ರದೇಶಗಳ ಸುತ್ತಮುತ್ತ ಯಾರು ಓಡಾಡಿದರೂ ಯಾವುದೇ ಅಪರಾಧ ನಡೆಯದ ವಾತಾವರಣ ನಿರ್ಮಾಣಕ್ಕೆ ಕ್ರಮವಹಿಸಬೇಕು. ಚಾಮುಂಡಿಬೆಟ್ಟದಲ್ಲಿ ವಾಸಿಸುತ್ತಿರುವವರು ಹಾಗೂ ಉತ್ತನಹಳ್ಳಿ ದೇವಸ್ಥಾನದ ವ್ಯವಸ್ಥೆಯೊಳಗಡೆ ಇರುವವರಿಗೆ ಗುರುತಿನ ಚೀಟಿ ನೀಡಲು ವ್ಯವಸ್ಥೆ ಮಾಡಲಾಗುವುದು. ಅಗತ್ಯವಿದ್ದಾಗ ಮಾತ್ರ ಇವರು ಓಡಾಡಲು ಅವಕಾಶವಿರುತ್ತದೆ. ಬೇರೆಯವರಿಗೆ ನಿಯಮಗಳನ್ನು ಅನ್ವಯಿಸಲಾಗುವುದು ಎಂದರು.

ಅಪರಾಧ ಕೃತ್ಯಗಳ ವಿಚಾರವಾಗಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿ, ಯಾವುದೇ ರಾಜಕೀಯ ಪಕ್ಷ ಜನಸಾಮಾನ್ಯರಿಗೆ ಅನುಕೂಲವಾಗುವ ಕೆಲಸ ಮಾಡಬೇಕು. ಆದರೆ, ಇಂತಹ ವಿಷಯಗಳನ್ನು ಇಟ್ಟುಕೊಂಡು ರಾಜಕೀಯ ಮಾಡಬಾರದು ಎಂದು ಹೇಳಿದರು.

× Chat with us