ಕರ್ತವ್ಯ ಲೋಪ ಮುಚ್ಚಿಡಲು ಭೂ ಮಾಫಿಯಾ ಪ್ರಸ್ತಾಪ: ಸಿಂಧೂರಿ ವಿರುದ್ಧ ಸಾರಾ ಸಿಡಿಮಿಡಿ

ಮೈಸೂರು: ರೋಹಿಣಿ ಸಿಂಧೂರಿ ಅವರು ತಮ್ಮ ಕರ್ತವ್ಯ ಲೋಪವನ್ನು ಮುಚ್ಚಿಡಲು ಭೂ ಮಾಫಿಯಾ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ಶಾಸಕ ಸಾರಾ ಮಹೇಶ್‌ ಅವರು ಆರೋಪಿಸಿದ್ದಾರೆ.

ಲ್ಯಾಂಡ್ ಮಾಫಿಯದಿಂದ ನನ್ನ ವರ್ಗಾವಣೆಯಾಗಿದೆ ಎಂದು ಆರೋಪಿಸಿರುವ ರೋಹಿಣಿ ಸಿಂಧೂರಿ ಮೈಸೂರಿನಲ್ಲಿ ಒಂದು ಗುಂಟೆ ಭೂ ಒತ್ತುವರಿಯನ್ನು ಸಹ ತೆರವುಗೊಳಿಸಲು ಆಸಕ್ತಿ ತೋರಲಿಲ್ಲ. ಇಂಥವರು ಲ್ಯಾಂಡ್ ಮಾಫಿಯದಿಂದ ವರ್ಗಾವಣೆಗೊಂಡ ಎಂದು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ. ರೋಹಿಣಿ ಸಿಂಧೂರಿ ಜಿಲ್ಲೆಯಿಂದ ವರ್ಗಾವಣೆಯಾಗಿ ನಿರ್ಗಮಿಸುವ ಸಂದರ್ಭದಲ್ಲಿ ತಮ್ಮ ಕರ್ತವ್ಯ ಲೋಪ ಮತ್ತು ವೈಫಲ್ಯಗಳನ್ನು ಮುಚ್ಚಿಡುವ ಪ್ರಯತ್ನದ ಭಾಗವಾಗಿ ಭೂ ಮಾಫಿಯ ವಿಚಾರ ಪ್ರಸ್ತಾಪಿಸಿದ್ದಾರೆ.

ಆದರೆ ವಾಸ್ತವದಲ್ಲಿ ಇವರ ಎಂಟು ತಿಂಗಳ ಅಧಿಕಾರಾವಧಿಯಲ್ಲಿ ನ್ಯಾಯಾಲಯದ ಆದೇಶದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ಕೇರ್ಗಳ್ಳಿ ಗ್ರಾಮದ ಹೂಳೆತ್ತಿಸುವ ಕಾರ್ಯವನ್ನ ಕೈಗೊಂಡಿರುವುದನ್ನು ಹೊರತುಪಡಿಸಿ, ಇಡಿ ಮೈಸೂರು ನಗರ ವ್ಯಾಪ್ತಿಯಲ್ಲಿ ಒಂದೇ ಒಂದು ಗುಂಟೆ ಒತ್ತವರಿಯನ್ನು ತೆರವುಗೊಳಿಸುವ ಪ್ರಯತ್ನವನ್ನು ಮಾಡಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈಗಲೂ ಕೂಡ ಅವರು ಸರ್ಕಾರಿ ಸೇವೆಯಲ್ಲಿಯೆ ಇದ್ದಾರೆ. ಹಾಗಾಗಿ ಅವರು ಭೂ ಒತ್ತುವರಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿದ್ದರೆ, ಆ ಮಾಹಿತಿಗಳ ಆಧಾರದ ಮೇಲೆ ನಗರದಲ್ಲಿ ಎಲ್ಲೆಲ್ಲಿ ಯಾರು ಯಾರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ. ಆ ಅಕ್ರಮದಲ್ಲಿ ಭಾಗಿಯಾಗಿರುವವರು ಯಾರು ಎಂಬ ಮಾಹಿತಿಯನ್ನು ರೋಹಿಣಿ ಸಿಂಧೂರಿ ಅವರಿಂದ ಪಡೆದು ಆ ಬಗ್ಗೆ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯೊಬ್ಬರ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಿ ಭೂ ಒತ್ತುವರಿಯ ಬಗ್ಗೆ ಮಾಹಿತಿಯನ್ನು ಬಹಿರಂಗ ಪಡಿಸಬೇಕು ಮತ್ತು ತಪ್ಪತಸ್ಥರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

 

× Chat with us