ಈ ಪಾರಂಪರಿಕ ಕಟ್ಟಡದ ಸ್ವಾಗತ ಕಮಾನು ಕುಸಿದು ಮೂರು ವರ್ಷಗಳೇ ಕಳೆಯಿತು
ಬಿ.ಎನ್.ಧನಂಜಯಗೌಡ
ಮೈಸೂರು: ಯದುವಂಶದ ಒಡೆಯರು ತಮ್ಮ ಆಡಳಿತ ನಿರ್ವಹಣೆಗೆ ನಿರ್ಮಾಣ ಮಾಡಿದ ಅನೇಕ ಕಟ್ಟಡಗಳ ಪೈಕಿ ಈಗ ಸರಸ್ವತಿಪುರಂನ ಅಗ್ನಿ ಶಾಮಕ ಠಾಣೆಯಾಗಿರುವ ಕಟ್ಟಡವೂ ಒಂದಾಗಿದ್ದು, ಇದು ಕೂಡ ಪಾರಂಪರಿಕ ಕಟ್ಟಡಗಳ ಪಟ್ಟಿಗೆ ಸೇರಿದೆ. ಆದರೆ, ಈ ಕಟ್ಟಡದ ಮುಂಭಾಗದ ಸ್ವಾಗತ ಕಮಾನು ಧರೆಗುರುಳಿ ಮೂರು ವರ್ಷಗಳೇ ಕಳೆದರೂ, ದುರಸ್ತಿ ಕಾರ್ಯ ನಡೆಸದೇ ನಿರ್ಲಕ್ಷ್ಯ ವಹಿಸಿರುವುದು ದುರಂತ.
ನಾಲ್ವಡಿ ಅವರ ದೂರದೃಷ್ಟಿಯಿಂದ ನಿರ್ಮಾಣವಾಗಿರುವುದೇ ಈ ಅಗ್ನಿ ಶಾಮಕ ಠಾಣೆ.1897ರ ಫೆಬ್ರವರಿ 27 ರಂದು ಮೈಸೂರಿನ ಅಂಬಾವಿಲಾಸ ಅರಮನೆಗೆ (ಆಗ ಮರದ ಅರಮನೆ) ಬೆಂಕಿ ಬೀಳುತ್ತದೆ. ಇದನ್ನು ಆರಿಸಲು ಬೆಂಗಳೂರಿನಲ್ಲಿ ಇದ್ದ ಅಗ್ನಿ ಶಾಮಕ ಠಾಣೆಗೆ ಟೆಲಿಕಮ್ಯುನಿಕೇಷನ್ ಮೂಲಕ ಮಾಹಿತಿ ನೀಡಿ, ಸ್ಟೀಮ್ ಇಂಜಿನ್ ವಾಹನವನ್ನು ಕಳುಹಿಸಲು ಹೇಳಲಾಗುತ್ತದೆ. ಈ ವಾಹನವು ಬರುವ ಹೊತ್ತಿಗೆ 24 ಗಂಟೆಯಾಗುತ್ತದೆ. ಅಷ್ಟೊತ್ತಿಗೆ ಮೈಸೂರಿನ ನಾಗರಿಕರು ಸಾಲಾಗಿ ನಿಂತು ದೊಡ್ಡಕೆರೆಯಿಂದ ನೀರು ಮತ್ತು ಕೆಸರನ್ನು ತಂದು ಬೆಂಕಿ ಆರಿಸಿರುತ್ತಾರೆ. ಇದನ್ನು ಮನಗಂಡ ನಾಲ್ವಡಿ ಕೃಷ್ಣರಾಜ ಒಡೆಯರು ಇಂತಹ ತುರ್ತು ಸಂದರ್ಭದಲ್ಲಿ ಶೀಘ್ರವಾಗಿ ನೆರವಿಗೆ ಬರುವಂತೆ ಮೈಸೂರಿನಲ್ಲಿಯೇ ಅಗ್ನಿ ಶಾಮಕ ಠಾಣೆಯನ್ನು ನಿರ್ಮಾಣ ಮಾಡಬೇಕು ಎಂದು ನಿರ್ಧರಿಸುತ್ತಾರೆ.
ಬಳಿಕ 1897ರ ನವೆಂಬರ್‌ನಲ್ಲಿ ಅರಮನೆಯ ನಿರ್ಮಾಣದ ಕೆಲಸ ಆರಂಭವಾಗುತ್ತದೆ. ಈ ಸಮಯದಲ್ಲಿಯೇ ಸರಸ್ವತಿಪುರಂನಲ್ಲಿ ಅಗ್ನಿ ಶಾಮಕ ಠಾಣೆ ನಿರ್ಮಾಣಕ್ಕೂ ಚಾಲನೆ ನೀಡಲಾಗುತ್ತದೆ. ಯಾವುದೇ ಸಂದರ್ಭದಲ್ಲೂ ಅನಾಹುತಗಳು ಸಂಭವಿಸಿದರೆ ಶೀಘ್ರವಾಗಿ ಅಗ್ನಿ ಶಾಮಕ ಸಿಬ್ಬಂದಿ ನೆರವಿಗೆ ಬರಬೇಕು ಎಂಬ ಉದ್ದೇಶದಿಂದಲೇ ಸಿಬ್ಬಂದಿಗೆ ಅನುಕೂಲವಾಗುವ ಹಾಗೆ ಅಲ್ಲಿಯೇ ವಸತಿ ಗೃಹಗಳನ್ನು ರಾಜರು ನಿರ್ಮಾಣ ಮಾಡುತ್ತಾರೆ. ಇಲ್ಲಿ ಕುದುರೆಗಳನ್ನು ಕಟ್ಟಲಾಗುತ್ತಿತ್ತು. ಅಗ್ನಿಶಾಮಕ ವಾಹನಗಳನ್ನು ನಿಲ್ಲಿಸಲು, ಸಿಬ್ಬಂದಿ ಮಕ್ಕಳು ಆಟವಾಡಲು ಸುಸಜ್ಜಿತ ಸ್ಥಳಾವಕಾಶವನ್ನು ರಾಜರು ಮಾಡಿಕೊಟ್ಟಿದ್ದರು. 1907ರಲ್ಲಿ ಅರಮನೆ ಗೃಹಪ್ರವೇಶವಾಯಿತು. 1912 ರಲ್ಲಿ ಅರಮನೆ ಕಾಮಗಾರಿ ಪೂರ್ಣವಾಯಿತು. ಈ ವೇಳೆಗೆ ಈ ಕಟ್ಟಡವು ನಿರ್ಮಾಣವಾಗಿತ್ತು ಎನ್ನುತ್ತಾರೆ ಪಾರಂಪರಿಕ ಸಮಿತಿ ಸದಸ್ಯ ಪ್ರೊ.ರಂಗರಾಜು.
ಕಮಾನು ಗೋಪುರ ಉರುಳಿದ್ದು ಯಾವಾಗ, ಹೇಗೆ?: 2019ರ ಆಗಸ್ಟ್ 9 ರಂದು ಅಗ್ನಿಶಾಮಕ ಠಾಣೆ ಕಟ್ಟಡದ ಮುಂಭಾಗದ ಸ್ವಾಗತ ಕಮಾನು ಧರೆಗುರುಳಿತು. ಆ.9ರಂದು ಮಧ್ಯಾಹ್ನ ಪೋಸ್ಟ್ ಕಾರ್ಡ್ ನೀಡಲು ಅಗ್ನಿಶಾಮಕ ಠಾಣೆಗೆ ಸರಸ್ವತಿಪುರಂ ಅಂಚೆ ಕಚೇರಿಯ ಮಹಿಳಾ ಪೋಸ್ಟ್‌ಮ್ಯಾನ್ ಆಗಮಿಸಿದ್ದರು. ಸ್ವಾಗತ ಕಮಾನು ಮುಂಭಾಗ ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಕಚೇರಿ ಒಳಗೆ ಹೋಗಿ. ಪೋಸ್ಟ್ ಕಾರ್ಡ್‌ಗಳನ್ನು ನೀಡಿ ಹೊರಗೆ ಬರುತ್ತಿದ್ದಂತೆ ದೊಡ್ಡ ಶಬ್ದ ಕೇಳಿಸಿದೆ. ಇದರಿಂದ ಸ್ವಾಗತ ಕಮಾನಿನ ಮುಂದೆ ನಿಂತಿದ್ದ ಸಿಬ್ಬಂದಿಗಳಿಬ್ಬರು ಹೆದರಿ ಹಿಂದೆ ಓಡಿದ್ದಾರೆ. ನೋಡು ನೋಡುತ್ತಿದ್ದಂತೆ ಸ್ವಾಗತ ಕಮಾನಿನ ಮುಂಭಾಗ ಕುಸಿದು ಬಿದ್ದಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಲಿಲ್ಲ. ಪೋಸ್ಟ್ ಮ್ಯಾನ್ ಅವರ ದ್ವಿಚಕ್ರ ವಾಹನ ಮಾತ್ರ ಜಖಂಗೊಂಡಿತು. ಘಟನೆ ನಡೆದ ಕೂಡಲೇ ಜಿಲ್ಲಾಡಳಿತ ಹಾಗೂ ಪಾರಂಪರಿಕಾ ಸಮಿತಿಗೆ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳು ವಿಷಯ ತಿಳಿಸಿದರು. ಸಮಿತಿ ಅನುಮತಿ ನಂತರ ಕಟ್ಟಡ ಮುಂಭಾಗದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ನಿರ್ವಹಣೆ ಕೊರತೆ: ಪಾರಂಪರಿಕ ಕಟ್ಟಡಗಳನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡಬೇಕು. ಆ ಕೆಲಸ ಆಗದಿದ್ದರೆ ಈ ರೀತಿಯ ಅನಾಹುತಗಳು ಆಗುತ್ತವೆ. ಸ್ವಾಗತ ಕಮಾನು ಧರೆಗುರುಳಿ ಮೂರು ವರ್ಷಗಳಾಗಿವೆ. ಇದರ ದುರಸ್ತಿ ಕಾರ್ಯ ಇನ್ನೂ ಆಗಿಲ್ಲ. ಇನ್ನು ಕಟ್ಟಡದ ಉಳಿದ ಭಾಗದಲ್ಲಿ ಬಣ್ಣ ಮಾಸುತ್ತಿದ್ದು, ಮಳೆಯಿಂದ ಗೋಡೆಗಳಿಗೆ ಶೀತ ಏರಿದೆ. ಕಟ್ಟಡದ ಮೇಲೆ ಗಿಡಗಳು ಬೆಳೆದಿರುವುದನ್ನು ಕಾಣಬಹುದು.
ಅಗ್ನಿಶಾಮಕ ಠಾಣೆಯೊಳಗೆ ಸಿಬ್ಬಂದಿ ಕ್ವಾರ್ಟರ್ಸ್ ಕೂಡ ಇದ್ದು, ಇಲ್ಲಿನ ಮನೆಗಳು ಹಳೆಯದಾಗಿರುವುದರಿಂದ ಇವು ಶಿಥಿಲಗೊಂಡಿದೆ ಎಂಬ ಮಾತುಕೇಳಿ ಬಂದಿದೆ. ಇಲ್ಲಿ ಸುಮಾರು 60ರಿಂದ 70 ಸಿಬ್ಬಂದಿ ವಾಸವಿದ್ದಾರೆ ಎನ್ನಲಾಗಿದೆ.
ಪಾರಂಪರಿಕ ತಜ್ಞರ ಸಮಿತಿಯ ಜೊತೆಗೆ ಚರ್ಚಿಸಿ ಅವರ ನಿರ್ದೇಶನದಂತೆ ಲೋಕೋಪಯೋಗಿ ಇಲಾಖೆಯವರು ದುರಸ್ತಿ ಕಾರ್ಯ ನಡೆಸುವರು. ದುರಸ್ತಿಗೆ 22 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಲೋಕೋಪಯೋಗಿ ಇಲಾಖೆಯವರು ಟೆಂಡರ್ ಪ್ರಕ್ರಿಯೆ ನಡೆಸುತ್ತಿದ್ದಾರೆ. ಮುಂದಿನ ವಾರದಿಂದ ಕೆಲಸ ಆರಂಭವಾಗಲಿದೆ.
-ರಾಜು, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ
ಮುಚ್ಚಲ್ಪಟ್ಟಿರುವ ಶಾಲೆಯ ಕೊಠಡಿಯಲ್ಲಿ ರಾರಾಜಿಸುತ್ತಿರುವ ಮದ್ಯದ ಬಾಟಲಿಗಳು; ನಾಗರಿಕರ ಆಕ್ರೋಶ ಹನೂರು: ನಿಗದಿತ ಸಂಖ್ಯೆಯ ಮಕ್ಕಳಿಲ್ಲ ಎಂಬ ಕಾರಣಕ್ಕೆ ಮುಚ್ಚಲ್ಪಟ್ಟಿರುವ…
ಕೆ.ಬಿ.ರಮೇಶನಾಯಕ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರ ಹುದ್ದೆಯತ್ತ ಶಾಸಕ ಅನಿಲ್ ಚಿತ್ತ ತಂದೆಗೆ ಅಧ್ಯಕ್ಷ ಹುದ್ದೆ ಕೊಡಿಸಲು ಶಾಸಕ ಡಿ.ರವಿಶಂಕರ್ ಯತ್ನ …
ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…
ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…
ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…