ಮತಾಂತರವಾದ ಆದಿವಾಸಿಗಳ ಮೀಸಲಾತಿ ಕಡಿತ ಮಾಡಿ: ಪ್ರತಾಪಸಿಂಹ

ಮೈಸೂರು: ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ಭಾಗದಲ್ಲಿರುವ ಹಾಡಿಗಳಲ್ಲಿ ಬೇರೆ ಧರ್ಮಗಳಿಗೆ ಮತಾಂತರ ಹೊಂದಿರುವರಿಗೆ ಅಥವಾ ಶಿಲುಬೆ ಧರಿಸಿ ಓಡಾಡುವ ಆದಿವಾಸಿಗಳಿದ್ದಲ್ಲಿ ಅಂಥವರಿಗೆ ಆದಿವಾಸಿ ಸೌಲಭ್ಯ ಹಾಗೂ ಮೀಸಲಾತಿಯನ್ನು ಕಡಿತಗೊಳಿಸಬೇಕು ಎಂದು ಸಂಸದ ಪ್ರತಾಪಸಿಂಹ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಾಡಿ ಜನರಿಗೆ ಸಮರ್ಪಕವಾಗಿ ಸೌಲಭ್ಯಗಳನ್ನು ತಲುಪಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.

ಆಗ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ, ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಹೆಚ್ಚಿನ ಹಾಡಿಗಳಿವೆ. ಹುಣಸೂರಿನಲ್ಲಿ 54, ಪಿರಿಯಾಪಟ್ಟಣದಲ್ಲಿ 38 ಹಾಗೂ ನಂಜನಗೂಡಿನಲ್ಲಿ 5 ಹಾಡಿಗಳಿವೆ. ಎಲ್ಲ ಹಾಡಿ ಜನರಿಗೂ ಸಮರ್ಪಕವಾಗಿ ಸೌಲಭ್ಯ ನೀಡಲಾಗುತ್ತಿದೆ. ಕೋವಿಡ್ ಸಂದರ್ಭಗಳಲ್ಲೂ ಅಂಗನವಾಡಿ ಕೇಂದ್ರಗಳ ಮೂಲಕ ಮನೆ-ಮನೆಗೆ ಆಹಾರ ಉತ್ಪನ್ನಗಳನ್ನು ತಲುಪಿಸಲಾಗಿದೆ ಎಂದರು.

ಇಷ್ಟೆಲ್ಲಾ ಸೌಲಭ್ಯ ನೀಡಿದರೂ ಏಕೆ ಜನರು ಮತಾಂತರ ಮಾಡುತ್ತಿದ್ದಾರೆ? ಕೆಲವರು ಏಸುಸ್ವಾಮಿ ಕೊಡುತ್ತಿದ್ದಾರೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಸರ್ಕಾರ ಹಾಡಿಗಳಿಗೆ ಸೌಲಭ್ಯ ನೀಡುತ್ತಿರುವುದು ಆದಿವಾಸಿಗಳು ಎಂದು. ಅವರು ಕ್ರೈಸ್ತ ಅಥವಾ ಇತರ ಧರ್ಮಕ್ಕೆ ಮತಾಂತರ ಹೊಂದಿದ್ದಲ್ಲಿ ಅಂಥವರಿಗೆ ಆದಿವಾಸಿ ಸೌಲಭ್ಯ ಹಾಗೂ ಮೀಸಲಾತಿಗಳನ್ನು ರದ್ದುಪಡಿಸಲು ಕೂಲಂಕಷವಾಗಿ ಪರಿಶೀಲಿಸಿ ಎಂದು ಸಲಹೆ ನೀಡಿದರು.

ಅಲ್ಲದೆ, ವಿದ್ಯುತ್ ವಂಚಿತ ಹಾಡಿಗಳಿಗೆ ಶೀಘ್ರ ಸಂಪರ್ಕ ಕಲ್ಪಿಸಬೇಕು. ಮಳೆಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸಿ ಎಂದು ತಾಕೀತು ಮಾಡಿದರು.

15ನೇ ವೇತನ ಆಯೋಗದಲ್ಲಿ ಸವರ್ಣೀಯರಿಗೂ ಆದ್ಯತೆ ನೀಡಿ: ಮನ್ರೇಗಾದಲ್ಲಿ ಎಸ್‌ಸಿ, ಎಸ್‌ಟಿ ಇರುವಂಥದ್ದು ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಗಳನ್ನು ತೆಗೆದುಕೊಳ್ಳುತ್ತೇವೆ. ಈ ಸಮುದಾಯಗಳು ಇರುವ ಸ್ಥಳಗಳಲ್ಲಿ ಒಂದೊಂದು ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಇರುತ್ತವೆ. ಆದರೆ, ಸವರ್ಣೀಯರು ಇರುವ ಬೀದಿಗಳಲ್ಲಿ ರಸ್ತೆ, ಚರಂಡಿಗಳೇ ಅಭಿವೃದ್ಧಿ ಆಗಿರುವುದಿಲ್ಲ. ಆದ್ದರಿಂದ ಮುಂದಿನ 15ನೇ ವೇತನ ಆಯೋಗದ ಅನುದಾನದಲ್ಲಿ ಸರ್ವಣೀಯರು ಇರುವ ಬೀದಿಗಳಲ್ಲಿಯೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದು ಸಂಸದ ಪ್ರತಾಪಸಿಂಹ ಸಲಹೆ ನೀಡಿದರು.

ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಪಂ ಸಿಇಒ ಎ.ಎಂ.ಯೋಗೇಶ್ ಉಪಸ್ಥಿತರಿದ್ದರು.

× Chat with us