ಕಾಳಸಂತೆಯಲ್ಲಿ ಮಾರಲು ಸಾಗಿಸುತ್ತಿದ್ದ ಪಡಿತರ ಅಕ್ಕಿ ವಶ!

ಪಿರಿಯಾಪಟ್ಟಣ: ಕೋವಿಡ್ ಸಂದರ್ಭದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಬಿಪಿಎಲ್, ಅಂತ್ಯೋದಯ ಕಾರ್ಡ್‌ಗಳಿಗೆ ನೀಡಿರುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಸಲುವಾಗಿ ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಪಟ್ಟಣದ ಗೋಣಿಕೊಪ್ಪಲು ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಗೋಣಿಕೊಪ್ಪಲು ಕಡೆ ತೆರಳುತ್ತಿದ್ದ ಗೂಡ್ಸ್ ವಾಹನವನ್ನು ಅಡ್ಡಗಟ್ಟಿ ಪರಿಶೀಲನೆ ನಡೆಸಿದಾಗ, ವಾಹನದಲ್ಲಿ ಸರ್ಕಾರ ಪಡಿತರ ಚೀಟಿದಾರರಿಗೆ ವಿತರಿಸಲು ನೀಡಲಾಗಿದ್ದ ಅಕ್ಕಿಯನ್ನು ವಿವಿಧ ಕಂಪನಿಗಳ ಹೆಸರಿನಲ್ಲಿ ತಲಾ 25 ಮತ್ತು 50 ಕೆಜಿ ಚೀಲಗಳಲ್ಲಿ ತುಂಬಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ನಡೆಸುತ್ತಿದ್ದ ವೇಳೆ ವಾಹನ ಚಾಲಕ ಕೆ.ಆರ್.ನಗರ ತಾಲ್ಲೂಕಿನ ರಮೇಶ್ ಎಂಬಾತ ಸ್ಥಳದಿಂದ ಪರಾರಿಯಾಗಿದ್ದು, ಬಳಿಕ ಪೊಲೀಸರ ಸಹಕಾರದಿಂದ ಗೂಡ್ಸ್ ವಾಹನವನ್ನು ಮಾಲು ಸಮೇತ ಪಟ್ಟಣದ ಪೊಲೀಸ್ ಠಾಣೆಗೆ ಕೊಂಡೊಯ್ದು ದೂರು ದಾಖಲಿಸಲಾಗಿದೆ.

ಬಳಿಕ ವಾಹನದಲ್ಲಿದ್ದ ಅಕ್ಕಿಯನ್ನು ಪರಿಶೀಲನೆ ನಡೆಸಿದಾಗ 25 ಕೆ.ಜಿ.ಯ 97 ಚೀಲಗಳನ್ನು ಹಾಗೂ 50 ಕೆ.ಜಿ.ಯ 68 ಚೀಲಗಳಲ್ಲಿ ಪಡಿತರ ಅಕ್ಕಿಯನ್ನು ಮರು ಪ್ಯಾಕ್ ಮಾಡಿರುವುದು ತಿಳಿದು ಬಂದಿದ್ದು, ವಶಪಡಿಸಿಕೊಂಡ ಅಕ್ಕಿಯನ್ನು ಎಪಿಎಂಸಿಯಲ್ಲಿ ಇರಿಸಿರುವ ಅಧಿಕಾರಿಗಳು ವಾಹನವನ್ನು ಮಾಲು ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ ತಿಳಿಸಿದ್ದಾರೆ.

× Chat with us