ಪ್ರಯಾಣಿಕರು ರೈಲಿನಲ್ಲಿ ಬ್ಯಾಗ್ ಕಳೆದುಕೊಂಡರೆ ಇಲಾಖೆಯಿಂದಲೇ ಪರಿಹಾರ!

ಹೊಸದಿಲ್ಲಿ: ರೈಲಿನಲ್ಲಿ ಪ್ರಯಾಣಿಸುವಾಗ ತಮ್ಮ ವಸ್ತುಗಳನ್ನು ಕಳೆದುಕೊಳ್ಳುವವರಿಗೆ ರೈಲ್ವೆ ಇಲಾಖೆಯೇ ಪರಿಹಾರ ನೀಡಬೇಕೆಂಬ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ.

ಇತ್ತೀಚೆಗೆ ಹೊಸದಿಲ್ಲಿಯಿಂದ ಸಿಕಂದರಾಬಾದ್‌ಗೆ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ಕಳವಾಗಿತ್ತು. ತನ್ನ ಸೀಟಿನ ಕೆಳಗೆ ವಸ್ತುಗಳ ಭದ್ರತೆಗಾಗಿ ಅಳವಡಿಸಬೇಕಿದ್ದ ಸರಪಳಿ ಇರಲಿಲ್ಲ. ಅದು ಇಲ್ಲದ್ದರಿಂದಲೇ ಸೀಟಿನ ಕೆಳಗೆ ಇಟ್ಟಿದ್ದ ಬ್ಯಾಗ್ ಕಳವಾಗಿದೆ ಎಂದು ಅವರು ದೂರು ನೀಡಿದ್ದರು. ಅನಧಿಕೃತ ವ್ಯಕ್ತಿಗಳು ರೈಲು ಬೋಗಿಗೆ ನುಸುಳುವುದನ್ನು ತಡೆಯಲು ಮತ್ತು ಟಿಕೆಟ್ ಹೊಂದಿಲ್ಲದ ವ್ಯಕ್ತಿಗಳು ಬೋಗಿಗೆ ಪ್ರವೇಶಿಸುವುದನ್ನುನಿಯಂತ್ರಿಸಲು ರೈಲ್ವೆ ಭದ್ರತಾ ಪಡೆ ವಿಫಲವಾಗಿದ್ದರಿಂದ ಘಟನೆ ನಡೆದಿದೆ ಎಂದು ಆರೋಪಿಸಿ ಆ ಮಹಿಳೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ (ಎನ್‌ಸಿಡಿಆರ್‌ಸಿ) ಮೆಟ್ಟಿಲೇರಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು, ಪ್ರಯಾಣಿಕರೊಬ್ಬರ ಕಳವಾದ ವಸ್ತುಗಳಿಗೆ ಸಂಬಂಧಿಸಿದಂತೆ ಪರಿಹಾರ ನೀಡುವಂತೆ ರೈಲ್ವೆ ಇಲಾಖೆಗೆ ಸೂಚಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಇಲಾಖೆಯು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು. ಸದರಿ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಶುಕ್ರವಾರ ಮೇಲ್ಮನವಿಯನ್ನು ವಜಾಗೊಳಿಸಿದ್ದು, ಪ್ರಯಾಣಿಕರ ಕಳೆದು ಹೋಗಿರುವ ವಸ್ತುಗಳಿಗೆ ಪರಿಹಾರ ಪಾವತಿಸುವಂತೆ ನಿರ್ದೇಶಿಸಿದೆ.

× Chat with us