ಜಾತಿ-ಜಾತಿ ನಡುವೆ ಸಂಘರ್ಷ ತಂದಿಡುವುದರಲ್ಲಿ ಬಿಜೆಪಿಯವ್ರು ನಿಸ್ಸೀಮರು: ಆರ್‌.ಧ್ರುವನಾರಾಯಣ್

ಚಾಮರಾಜನಗರ: ಜಾತಿ-ಜಾತಿಗಳ ನಡುವೆ ಸಂಘರ್ಷ ತರುವುದರಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಮಾಜಿ ಸಂಸದ ಆರ್‌.ಧ್ರುವನಾರಾಯಣ್‌ ಟೀಕಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಮತ್ತು ಸಿದ್ದರಾಮಯ್ಯರ ನಾಯಕತ್ವದಲ್ಲಿ ಕಾಂಗ್ರೆಸ್‌ ಪಕ್ಷ ಸಾಕಷ್ಟು ಬಲಿಷ್ಟವಾಗಿ ಬೆಳೆಯುತ್ತಿದೆ. ಇಬ್ಬರಲ್ಲಿ ವೈಮನಸ್ಸು ಮೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದು ಬಿಜೆಪಿಯ ಹುಟ್ಟು ಗುಣ. ಜಾತಿ ಜಾತಿಗಳ ಸಂಘರ್ಷ ತರುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ನಿಮ್ಮ ಮನೆಯೇ ಹತ್ತಿ ಉರಿಯುತ್ತಿದೆ. ಯಾವ ಸಮಯದಲ್ಲಾದರೂ ಸರ್ಕಾರ ಬಿದ್ದು ಹೋಗಬಹುದು. ಈಗಾಗಲೇ ಮಂತ್ರಿ ಸ್ಥಾನ ಸಿಗದವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪರಮೇಶ್ವರ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಎಂಬ ಸಚಿವ ಈಶ್ವರಪ್ಪ ಹೇಳಿಕೆ ಪ್ರತಿಕ್ರಿಯಿಸಿ, ಬಿಜೆಪಿ ಪಕ್ಷದವರಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಇನ್ನೊಬ್ಬರ ಮನೆಗೆ ಹೋಗಿ ವಿಷ ಇಡುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬಹಳ‌ ಎತ್ತರಕ್ಕೆ ಬೆಳೆದಿದ್ದಾರೆ. ಅವರೊಬ್ಬ ಮಾಸ್ ಲೀಡರ್. ಸಿದ್ದರಾಮಯ್ಯನವರ ಮೇಲೆ ಕಪ್ಪು ಚುಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಈಶ್ವರಪ್ಪ ಮಾಡಿರುವ ಆರೋಪ ಆಧಾರರಹಿತವಾಗಿದೆ. ಮಂತ್ರಿಗಳಾಗಿ ಈಶ್ವರಪ್ಪ ಬಾಲಿಷ ಹೇಳಿಕೆಗಳನ್ನು ನೀಡಬಾರದು ಎಂದು ತಿಳಿಹೇಳಿದ್ದಾರೆ.

× Chat with us