ಚಾಮರಾಜನಗರ ಆಕ್ಸಿಜನ್‌ ದುರಂತ: ಕುಟುಂಬಸ್ಥರಿಗೆ 20 ಲಕ್ಷ ಪರಿಹಾರ ಕೊಡುವಂತೆ ಧ್ರುವನಾರಾಯಣ್‌ ಆಗ್ರಹ

ಹನೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಲು ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ವತಿಯಿಂದ 250 ಆಂಬ್ಯುಲೆನ್ಸ್‌ಗಳನ್ನು ಒದಗಿಸಲಾಗಿದೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ್ ತಿಳಿಸಿದರು.

ಹನೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ರಥ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೊನಾ ಸಂಕಷ್ಟದಲ್ಲಿ ಸರ್ಕಾರ ಒಂದು ಕಡೆ ಕಾರ್ಯನಿರ್ವಹಿಸಿದರೆ ಕಾಂಗ್ರೆಸ್ ಪಕ್ಷ ಕೂಡ ಸಂಕಷ್ಟದಲ್ಲಿ ನೆರವಾಗಬೇಕು ಎಂಬ ಉದ್ದೇಶದಿಂದ ಉಚಿತ ಆಂಬ್ಯುಲೆನ್ಸ್ ಸೇವೆ, ಉಚಿತ ಮೆಡಿಕಲ್ ಕಿಟ್ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಚಾಮರಾಜನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಕ್ಕೂ ಪಕ್ಷದ ವತಿಯಿಂದ 4 ಆಂಬ್ಯುಲೆನ್ಸ್ ರಸ್ತೆಗಿಳಿಸಲಾಗಿದೆ ಎಂದರು.

ಸುಳ್ವಾಡಿ ದುರಂತ ಹೊರತುಪಡಿಸಿದರೆ ಜಿಲ್ಲೆಯಲ್ಲಿ ಸಂಭವಿಸಿದ ಮತ್ತೊಂದು ಘೋರ ದುರಂತವೆಂದರೆ ಆಕ್ಸಿಜನ್‌ ಕೊರತೆಯಿಂದ 36 ಜನ ಪ್ರಾಣ ಕಳೆದುಕೊಂಡಿದ್ದು. ಮೃತರ ಕುಟುಂಬದವರು ದುಡಿಯುವ ಕೈಗಳಾಗಿದ್ದು, ಅವರಿಗೆ ನೆರವಾಗುವ ದೃಷ್ಠಿಯಿಂದ ಸರ್ಕಾರ ತಾತ್ಕಾಲಿಕವಾಗಿ 2 ಲಕ್ಷ ಪರಿಹಾರ ನೀಡಿದೆ. ಈ ಮೊತ್ತವನ್ನು ಶೀಘ್ರವಾಗಿ 20 ಲಕ್ಷಕ್ಕೆ ಹೆಚ್ಚಿಸಬೇಕು. ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚೆಚ್ಚು ಕೋವಿಡ್‌ ಪರೀಕ್ಷೆಗಳಿಗೆ ಸರ್ಕಾರ ಮುಂದಾಗಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಣೆ ಮಾಡಿರುವ ವಿಶೇಷ ಪ್ಯಾಕೇಜ್ ಸಹಾಯ ಧನ ಪಡೆಯಲು ರೈತರು ಹರಸಾಹಸ ಪಡುವಂತಾಗಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರಬಂದು ಅರ್ಜಿ ಹಾಕಲೂ ಸಾಧ್ಯವಿಲ್ಲ. ಆನ್‍ಲೈನ್‍ನಲ್ಲಿ ಅರ್ಜಿ ಹಾಕಲೂ ಸಾಧ್ಯವಾಗುತ್ತಿಲ್ಲ. ಆದುದರಿಂದ ನಿಯಮವನ್ನು ಸಡಿಲಿಕೆ ಮಾಡಬೇಕು ಮತ್ತು ಅಸಂಘಟಿತ ವಲಯಕ್ಕೆ ನೀಡಿರುವ 2 ಸಾವಿರ ಸಹಾಯ ಧನವನ್ನು 10 ಸಾವಿರಕ್ಕೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಶಾಸಕ ಆರ್.ನರೇಂದ್ರ, ತಾಪಂ ಸದಸ್ಯ ಜವಾದ್ ಅಹಮ್ಮದ್, ಪ.ಪಂ ಉಪಾಧ್ಯಕ್ಷ ಹರೀಶ್‍ಕುಮಾರ್, ಸದಸ್ಯರಾದ ಸಂಪತ್ ಕುಮಾರ್, ಗಿರೀಶ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್, ವೈದ್ಯಾಧಿಕಾರಿ ಪುಷ್ಪರಾಣಿ, ಮುಖಂಡರಾದ ಈಶ್ವರ್, ದೇವರಾಜು, ಶಿವಕುಮಾರ್, ಉದ್ದನೂರು ಸಿದ್ದರಾಜು, ಮೆಡಿಕಲ್ ರಮೇಶ್ ಇನ್ನಿತರರು ಹಾಜರಿದ್ದರು.

× Chat with us