ಶಿವಸೇನಾ ಸಂಸದರ ವಿರುದ್ಧ ಕಟ್ಟಿಗೆ ಹಿಡಿದು ಪ್ರತಿಭಟನೆ

ಚಾಮರಾಜನಗರ: ಮಹಾರಾಷ್ಟ್ರದ ಶಿವಸೇನಾ ಸಂಸದರು ಸಂಸತ್‌ನಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಹೇಳಿರುವುದನ್ನು ಖಂಡಿಸಿ ಕರ್ನಾಟಕ ಸೇನಾಪಡೆ ಕಾರ್ಯಕರ್ತರು ಕಟ್ಟಿಗೆ ಹಿಡಿದು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಶಿವಸೇನಾ ಸಂಸದರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪದೇಪದೆ ಕನ್ನಡದ ನೆಲದ ಬಗ್ಗೆ ಕ್ಯಾತೆ ತೆಗೆಯುತ್ತಿದ್ದು, ನಮ್ಮ ನೆಲದ ವಿಷಯವಾಗಿ ತಲೆ ಹಾಕಿದರೆ ಹುಷಾರ್ ಎಂದು ತಿಳಿಸಲು ಕೈಯಲ್ಲಿ ಕಟ್ಟಿಗೆ ಹಿಡಿದಿರುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಚಾಮರಾಜೇಶ್ವರ ಉದ್ಯಾನದಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿ ನಂತರ ರಸ್ತೆ ತಡೆ ನಡೆಸಿದರು. ಈ ವೇಳೆ ಶಿವಸೇನಾ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕೇಂದ್ರ ಸರ್ಕಾರ ಮಹಾಜನ್ ವರದಿ ಜಾರಿಗೆ ಮತ್ತು ಸೊಲ್ಲಾಪುರ, ಸಾಂಗ್ಲಿ ಮೊದಲಾದ ಅಚ್ಚಕನ್ನಡ ಪ್ರದೇಶಗಳು ಕರ್ನಾಟಕಕ್ಕೆ ಸೇರ್ಪಡೆಗೆ ಮುಂದಾಗಬೇಕು. ರಾಜ್ಯದ ಸಂಸದರು ಲೋಕಸಭೆಯಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು‌.

ಪ್ರತಿಭಟನೆಯಲ್ಲಿ ಚಾ.ವೆಂ. ರಾಜ್ ಗೋಪಾಲ್, ಶಿವಶಂಕರನಾಯಕ, ಪಣ್ಯದಹುಂಡಿ ರಾಜು, ಗು.ಪುರುಷೋತ್ತಮ್, ತಾಂಡವಮೂರ್ತಿ, ಸ್ವಾಮಿ, ದೊರೆ, ಸಾಗರ್, ಜಗದೀಶ್, ರವಿಚಂದ್ರಪ್ರಸಾದ್, ನಂಜುಂಡ ಇತರರು ಇದ್ದರು.

× Chat with us