ಉಮೇಶ್‌ ಕತ್ತಿ ಭಾವಚಿತ್ರಕ್ಕೆ ಮೊಟ್ಟೆ, ಕೊಳೆತ ಟೊಮೆಟೊ ಏಟು!

ಚಾಮರಾಜನಗರ: ಟಿವಿ, ಬೈಕ್, ಫ್ರಿಡ್ಜ್ ಹೊಂದಿರುವವರ ಬಿಪಿಎಲ್ ಪಡಿತರ ಚೀಟಿ ರದ್ದು ಪಡಿಸುವುದಾಗಿ ಹೇಳಿರುವ ಆಹಾರ ಸಚಿವ ಉಮೇಶ ಕತ್ತಿ ಅವರ ಭಾವಚಿತ್ರಕ್ಕೆ ಮೊಟ್ಟೆ, ಕೊಳೆತ ಟೊಮೆಟೊದಿಂದ ಹೊಡೆದು ಕರ್ನಾಟಕ ಸೇನಾಪಡೆ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

ಚಾಮರಾಜೇಶ್ವರ ಉದ್ಯಾನದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ಬಂದು ಉಮೇಶ್ ಕತ್ತಿ ವಿರುದ್ಧ ಧಿಕ್ಕಾರ ಕೂಗಿ ಅವರ ಭಾವಚಿತ್ರಕ್ಕೆ ಕೊಳೆತ ಟೊಮೆಟೊದಿಂದ ಹೊಡೆದು ಪ್ರತಿಭಟನೆ ನಡೆಸಿದರು.
ಸೇನಾಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಉಮೇಶ್ ಕತ್ತಿ ಅವರು ಬಡವರ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸುವ ಹೇಳಿಕೆ ಅಕ್ಷಮ್ಯ ಎಂದು ಖಂಡಿಸಿದರು.

ಉಮೇಶ್ ಕತ್ತಿ ಈ ಹಿಂದೆ ಪತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿದ್ದರು. ಈಗ ಬಿಪಿಎಲ್ ಕಾರ್ಡ್ ರದ್ದು ಪಡೆಸಲು ಹೊರಟಿದ್ದು ಇವರನ್ನು ಸಿಎಂ ಕೂಡಲೇ ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶಾ.ಮುರಳಿ, ನಿಜಧ್ವನಿ ಗೋವಿಂದರಾಜು, ಶಿವಶಂಕರ ನಾಯಕ, ಗು.ಪುರುಷೋತ್ತಮ್, ರವಿಚಂದ್ರಪ್ರಸಾದ್ ಕಹಳೆ, ವೀರಭದ್ರ, ತಾಂಡವಮೂರ್ತಿ, ಎಂಡಿಆರ್ ಸ್ವಾಮಿ, ದೊರೆ, ನಂಜುಂಡ, ಹ.ವಿ.ನಟರಾಜು ಇತರರು ಭಾಗವಹಿಸಿದ್ದರು.

× Chat with us