ಸಿದ್ದರಾಮಯ್ಯ ಅವ್ರೆ ನಿಮಗೇಕೆ ದೇಗುಲದ ಮೇಲೆ ಈಗ ಇಷ್ಟೊಂದು ಪ್ರೀತಿ: ಪ್ರತಾಪಸಿಂಹ ಪ್ರಶ್ನೆ

ಮೈಸೂರು: ಸಿದ್ದರಾಮಯ್ಯ ಅವರೇ ದೇಗುಲದ ಮೇಲೆ ನಿಮಗೇಕೆ ಈಗ ಇಷ್ಟೊಂದು ಪ್ರೀತಿ ಬಂದಿದೆ ಎಂದು ಸಂಸದ ಪ್ರತಾಪಸಿಂಹ ಪ್ರಶ್ನಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಣೆ ಮಾಡುವುದರಲ್ಲಿ ನಿರತರಾಗಿದ್ದ ನಿಮಗೆ ಕೋರ್ಟ್‌ ಆದೇಶ ಗೊತ್ತಾಗಲಿಲ್ಲವೇ? ದೇವಸ್ಥಾನವನ್ನು ಉಳಿಸಿಕೊಳ್ಳಲು ನಿಮ್ಮ ಆಡಳಿತದಲ್ಲಿ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ನಿಮಗೆ ದೇವಸ್ಥಾನದ ಬಗ್ಗೆ ಪ್ರೀತಿ ಇದ್ದಿದ್ದರೆ ವಿಗ್ರಹ ಭಂಜಕ ಟಿಪ್ಪು ಜಯಂತಿ ಮಾಡುತ್ತಿರಲಿಲ್ಲ. ಮತಕ್ಕಾಗಿ ವೀರಶೈವ-ಲಿಂಗಾಯತ ಜಾತಿ ಒಡೆಯುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ದೇಗುಲ ತೆರವಿನ ನಂತರ ಎದ್ದಿರುವ ವಿಚಾರದ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಇದು ಆ ಸರ್ಕಾರ, ಈ ಸರ್ಕಾರ ಎಂದು ಮಾತನಾಡುವುದಲ್ಲ. ಈ ವಿವಾದ ತಾರ್ಕಿಕ ಅಂತ್ಯ ಕಾಣಬೇಕಾದರೆ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ. ಆದರೆ, ಇದನ್ನು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲೂ ಮಿಸ್‌ಲೀಡ್‌ ಆಗಿದೆ. ಇಲ್ಲೂ ನಿಮ್ಮನ್ನು ಅಧಿಕಾರಿಗಳು ಹೇಗೆ ಮಿಸ್‌ಲೀಡ್‌ ಮಾಡಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಇಡೀ ಆಡಳಿತಾತ್ಮಕ ಚುಕ್ಕಾಣಿ ಅಧಿಕಾರಿಗಳಿಗೆ ಕೊಟ್ಟಿರುತ್ತೇವೆ. ಆಡಳಿತ ವಿಚಾರದಲ್ಲಿ ಎಲ್ಲವೂ ಅವರಿಗೆ ತಿಳಿದಿರುತ್ತದೆ. ಹಾಗಂತ ಇದನ್ನು ಸರ್ಕಾರಕ್ಕೆ ಅಥವಾ ರಾಜಕಾರಣಿಗಳಿಗೆ ಯಾಕೆ ಅರ್ಥೈಸಿಕೊಳ್ಳಬೇಕು? ದೇಗುಲ ಹೊಡೆಯುವ ಮುನ್ನ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶದಲ್ಲಿದೆ. ಅಧಿಕಾರಿಗಳು ಮಾಡಿದ ಗೊಂದಲ ಇದು. ನೀವು ಮೈಮೇಲೆ ಎಳೆದುಕೊಂಡು ಮಾತನಾಡಿಬೇಡಿ ಎಂದು ತಿಳಿಸಿದರು.

2018ರಲ್ಲಿ ದೇವಸ್ಥಾನ ತೆರವು ವಿಚಾರದಲ್ಲಿ ಸುಪ್ರೀಂ ಅಂತಿಮ ಆದೇಶ ನೀಡಿದೆ. ಈ ಆದೇಶವನ್ನು ಐಎಎಸ್‌ ಅಧಿಕಾರಿಗಳು ನಿಮಗೂ ಸರಿಯಾಗಿ ವಿವರಿಸಿಲ್ಲ. ಬಿಜೆಪಿ ಆಡಳಿತದ ಅವಧಿಯಲ್ಲೂ ತಪ್ಪು ನಡೆಯಿತು. ನಿಮ್ಮ ಅಧಿಕಾರದಲ್ಲೂ ತಪ್ಪು ಮುಂದುವರಿಯಿತು. ಆಡಳಿತಾತ್ಮಕ ವಿಚಾರದಲ್ಲಿ ಐಎಎಸ್‌ ಅಧಿಕಾರಿಗಳು ಸರ್ಕಾರಕ್ಕೆ ಸರಿಯಾಗಿ ವಿವರಣೆ ನೀಡುತ್ತಿಲ್ಲ. ಅಧಿಕಾರಿಗಳು ಮಾಡುವ ತಪ್ಪನ್ನು ರಾಜಕಾರಣಿಗಳು ಮೈಮೇಲೆ ಎಳೆದುಕೊಂಡು ಮಾತನಾಡಬಾರದು ಎಂದರು.

× Chat with us