ಮೈಸೂರಿನಲ್ಲಿ ಆಫ್ರಿಕನ್ ಸಫಾರಿಯ ಚಿಂತನೆ!

ಮೈಸೂರಿನಲ್ಲಿ ಆಫ್ರಿಕನ್‌ ಸಫಾರಿಯ ಚಿಂತನೆ ನಡೆದಿದೆ. ಅದಕ್ಕಾಗಿ ಚಾಮರಾಜೇಂದ್ರ ಮೃಗಾಲಯ ವ್ಯಾಪ್ತಿಯನ್ನು ವಿಸ್ತರಿಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರ ಮುಂದಾಗಿದೆ.

ಕೃತಕವಾಗಿ ನಿರ್ಮಿಸುವ ಕಾಡಿನ ನಡುವೆ ತೆರೆದ ವಾಹನದಲ್ಲಿ ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸುವುದಕ್ಕೆ ಅನುಕೂಲ ಕಲ್ಪಿಸಲು, 116 ಎಕರೆ ವ್ಯಾಪ್ತಿ ಪ್ರದೇಶದಲ್ಲಿರುವ ರೇಸ್‌ಕೋರ್ಸ್‌ವರೆಗೂ ಮೃಗಾಲಯದ ಆವರಣವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪ್ರಾಧಿಕಾರ ತೀರ್ಮಾನಿಸಿದೆ.

ಈ ಬಗ್ಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌.ಮಹಾದೇವಸ್ವಾಮಿ ಮಾತನಾಡಿ, ಚಾಮುಂಡಿ ಬೆಟ್ಟದ ತಪ್ಪಲಿನ ರೇಸ್‌ಕೋರ್ಸ್‌ನ ಗುತ್ತಿಗೆ ಅವಧಿ 2021ರ ಮೇ ತಿಂಗಳಲ್ಲಿ ಅಂತ್ಯವಾಗಿದೆ. ರೇಸ್‌ಕೋರ್ಸ್‌ ನಡೆಯುತ್ತಿದ್ದ ಸ್ಥಳವನ್ನು ಮೃಗಾಲಯದ ವಿಸ್ತರಣೆಗೆ ಬಳಸಿಕೊಂಡರೆ ಮೃಗಾಯಲದಲ್ಲಿನ ಪ್ರಾಣಿ-ಪಕ್ಷಿಗಳ ಸಂಖ್ಯೆಯನ್ನು ಇಮ್ಮಡಿಗೊಳಿಸಬಹುದು. ಅಲ್ಲದೇ, ಮೈಸೂರಿನ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ ಎಂಬ ಅಂಶವನ್ನು ಇಟ್ಟುಕೊಂಡು ಮೃಗಾಲಯ ವ್ಯಾಪ್ತಿಯನ್ನು ವಿಸ್ತರಿಸುವ ಬಗ್ಗೆ ಕಳೆದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗಿದೆ. ರೇಸ್‌ಕೋರ್ಸ್‌ ಆವರಣಕ್ಕೆ ಮೃಗಾಲಯದಿಂದಲೇ ಸಂಪರ್ಕ ಕಲ್ಪಿಸಲಿದ್ದು, ಅಂಡರ್‌ಪಾಸ್‌ ಅಥವಾ ಮೇಲ್ಸೇತುವೆ ನಿರ್ಮಿಸಲಾಗುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರು ಅಲ್ಲಿಗೂ ತೆರಳಿ ತೆರೆದ ವಾಹನದ ಮೂಲಕ ಇಡೀ ರೇಸ್‌ಕೋರ್ಸ್‌ ಆವರಣದಲ್ಲಿರುವ ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.

× Chat with us