ಶೀಘ್ರದಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗಲಿದೆ: ಅಪ್ಪಚ್ಚು ರಂಜನ್

ಮಡಿಕೇರಿ: ಶೀಘ್ರದಲ್ಲೇ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಇಳಿಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಚಿಂತನೆ ನಡೆಸಿದ್ದಾರೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಪೆಟ್ರೋಲ್, ಡೀಸೆಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಪ್ರತಿ ಲೀಟರ್‌ಗೆ 20 ರೂಪಾಯಿ ಕಡಿಮೆ ಆಗುತ್ತದೆ. ಆದರೆ ಇದರಿಂದ ರಾಜ್ಯಗಳ ಆದಾಯಕ್ಕೆ ಪೆಟ್ಟು ಬೀಳುತ್ತದೆ. ಹೀಗಾಗಿ ಜಿಎಸ್‌ಟಿ ವ್ಯಾಪ್ತಿಗೆ ತರುವುದನ್ನು ರಾಜ್ಯಗಳು ವಿರೋಧಿಸುತ್ತಿವೆ. ಆದರೆ ಮೂರು ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಇಳಿಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಚಿಂತಿಸಿದ್ದಾರೆ ಎಂದರು.

ಕೋವಿಡ್ ಬಂದ ಬಳಿಕ ಈಗಾಗಲೇ ವ್ಯಾಕ್ಸಿನ್ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಹಲವು ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಅದಕ್ಕೆಲ್ಲಾ ಹಣ ಬೇಕಾಗಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೊಂದಾಣಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಹಿಂದೆ ದೇಶವನ್ನಾಳಿದ ಸರ್ಕಾರಗಳು ಅರಬ್ ದೇಶಗಳಲ್ಲಿ ಆಯಿಲ್ ಬಾವಿಗಳನ್ನು ಖರೀದಿಸಬೇಕಾಗಿತ್ತು. ಅಂದು ಖರೀದಿಸಿದ್ದರೆ ಇಂದು ಅನುಕೂಲವಾಗುತಿತ್ತು. ಕಚ್ಚಾತೈಲ ಬೆಲೆ ಜಾಸ್ತಿಯಾದಾಗ ನಮ್ಮ ಬಾವಿಗಳಿಂದಲೇ ತೈಲ ಪೂರೈಸಬಹುದಾಗಿತ್ತು. ಇನ್ನಾದರೂ ಅರಬ್ ದೇಶಗಳಲ್ಲಿ ತೈಲ ಬಾವಿಗಳ ಖರೀದಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.

× Chat with us