ಅಕ್ಟೋಬರ್‌ನಲ್ಲಿ ಕೋವಿಡ್ ಮೂರನೇ ಅಲೆ ಉತ್ತುಂಗಕ್ಕೆ, ಮಕ್ಕಳಿಗೆ ಅಪಾಯ ಸಾಧ್ಯತೆ: ಗೃಹ ಸಚಿವಾಲಯ ಎಚ್ಚರಿಕೆ

ಹೊಸದಿಲ್ಲಿ: ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯು ಅಕ್ಟೋಬರ್ ವೇಳೆಗೆ ಉತ್ತುಂಗಕ್ಕೇರುವ ಸಾಧ್ಯತೆ ಇದ್ದು, ಮಕ್ಕಳಿಗೆ ಹೆಚ್ಚು ಅಪಾಯವಿದೆ ಎಂದು ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆ ನೀಡಿದೆ.

ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಸ್ಥಾಪಿಸಲಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯಡಿ ರಚಿಸಲಾದ ತಜ್ಞರ ಸಮಿತಿ ತನ್ನ ವರದಿಯಲ್ಲಿ ಈ ಆತಂಕದ ವಿಷಯವನ್ನು ತಿಳಿಸಿದೆ. ಇಂಥ ಸನ್ನಿವೇಶಗಳನ್ನು ಎದುರಿಸಲು ದೇಶಾದ್ಯಂತ ಇರುವ ಮಕ್ಕಳ ಸೌಲಭ್ಯಗಳು ಅಸಮರ್ಪಕವಾಗಿವೆ ಎಂದು ತಿಳಿಸಿರುವ ಸಮಿತಿಯು ವೈದ್ಯಕೀಯ ಮೂಲ ಸೌಕರ್ಯಗಳು ಮತ್ತು ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಲು ಸಲಹೆ ಮಾಡಿದೆ.

ಈ ವರದಿಯನ್ನು ಪ್ರಧಾನಮಂತ್ರಿಯವರ ಕಾರ್ಯಾಲಯಕ್ಕೂ ಸಲ್ಲಿಸಲಾಗಿದ್ದು, ವೈದ್ಯಕೀಯ ಸೌಲಭ್ಯಗಳು, ವೈದ್ಯರು ಮತ್ತು ಸಿಬ್ಬಂದಿ ಕೊರತೆ ಮತ್ತು ಇಂಥ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸಲು ವೆಂಟಿಲೇಟರ್‌ಗಳು, ಅಂಬ್ಯುಲೆನ್ಸ್‌ಗಳಂಥ ಅಗತ್ಯ ಉಪಕರಣಗಳ ಅಭಾವದ ಬಗ್ಗೆಯೂ ಸಮಿತಿ ಎಚ್ಚರಿಕೆ ನೀಡಿದೆ.

ಕೋವಿಡ್-19 ಮೂರನೇ ಅಲೆಯು ಇತರರಿಗಿಂತ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂಬ ಆತಂಕದ ನಡುವೆ ಮಕ್ಕಳ ಆರೈಕೆಯನ್ನು ಬಲಪಡಿಸಲು ವಿಶೇಷ ಒತ್ತು ನೀಡಲಾಗಿದೆ.

× Chat with us