ನಿಗದಿತ ದಿನಾಂಕಕ್ಕೆ ಒಂದು ದಿನ ಮೊದಲೇ ಕಲಾಪ ಸಮಾಪ್ತಿ!

ಹೊಸದಿಲ್ಲಿ: ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯ ಚಳಿಗಾಲ ಅಧಿವೇಶನದ ಕಲಾಪ ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ.

ಪೂರ್ವ ನಿಗದಿಯಂತೆ ಈ ಬಾರಿಯ ಸಂಸತ್ತಿನ ಚಳಿಗಾಲ ಅಧಿವೇಶನ ಗುರುವಾರ ಮುಕ್ತಾಯವಾಗಬೇಕಿತ್ತು. ಅದಕ್ಕೆ ಒಂದು ದಿನ ಮೊದಲೇ ಲೋಕಸಭಾಧ್ಯಕ್ಷರು ಹಾಗೂ ರಾಜ್ಯಸಭೆಯಲ್ಲಿ ಸಭಾಪತಿಗಳು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.
ನ.29ರಂದು ಚಳಿಗಾಲ ಅಧಿವೇಶನ ಆರಂಭವಾದಾಗಿನಿಂದ ಉಭಯ ಸದನಗಳಲ್ಲಿಯೂ ಫಲಪ್ರದ ಚರ್ಚೆ, ಕಲಾಪಗಳು ನಡೆಯುವುದಕ್ಕಿಂತ ವಿಪರೀತ ಗದ್ದಲ, ಕೋಲಾಹಲಗಳು ನಡೆದಿದ್ದೇ ಹೆಚ್ಚು. 12 ಮಂದಿ ಸದಸ್ಯರನ್ನು ರಾಜ್ಯಸಭೆಯಿಂದ ಅಮಾನತು ಮಾಡಿದ್ದು, ಲಖಿಂಪುರ ಖೇರಿ ಘಟನೆ ಸೇರಿದಂತೆ ಅನೇಕ ವಿಷಯಗಳು ತೀವ್ರ ಕೋಲಾಹಲ ಎಬ್ಬಿಸಿದವು.

ಲೋಕಸಭೆ: ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ 18 ದಿನಗಳ ಕಲಾಪ ನಡೆದಿತ್ತು. ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆತ ಮತ್ತು ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆಯಂತಹ ಪ್ರಮುಖ ಶಾಸನಗಳ ಅಂಗೀಕಾರಕ್ಕೆ ಈ ಬಾರಿ ಸದನ ಕಲಾಪ ಸಾಕ್ಷಿಯಾಯಿತು. ಬೆಲೆ ಏರಿಕೆ ಮತ್ತು ಲಖಿಂಪುರ ಖೇರಿ ಹಿಂಸಾಚಾರದಂತಹ ಹಲವಾರು ವಿಷಯಗಳ ಬಗ್ಗೆ ವಿರೋಧ ಪಕ್ಷದ ಸದಸ್ಯರು ಅಡ್ಡಿಪಡಿಸಿದ್ದರಿಂದ ಅಧಿವೇಶನವು 18 ಗಂಟೆ 48 ನಿಮಿಷಗಳು ಉಪೋಂಗವಾಗದೆ ಹೋದವು.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಡಿ.2 ರಂದು ಕೆಳಮನೆಯು ಶೇಕಡಾ 204 ರಷ್ಟು ದಾಖಲೆಯ ಚರ್ಚೆಯನ್ನು ಕಂಡಿದೆ. ಒಟ್ಟು 99 ಸಂಸದರು ಕೋವಿಡ್-19 ಕುರಿತು 12 ಗಂಟೆ 26 ನಿಮಿಷಗಳ ಸುದೀರ್ಘ ಚರ್ಚೆಯಲ್ಲಿ ಭಾಗವಹಿಸಿದರು, ಇದರಲ್ಲಿ ಅವರು ಕೋವಿಡ್-19 ಅವಧಿಯಲ್ಲಿ ತಮ್ಮ ಪ್ರದೇಶಗಳಲ್ಲಿ ಮಾಡಿದ ಅತ್ಯುತ್ತಮ ಕೆಲಸವನ್ನು ಸದನದೊಂದಿಗೆ ಹಂಚಿಕೊಂಡಿದ್ದಾರೆ ಎಂದು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಸದನ ಸದಸ್ಯರೊಂದಿಗೆ ಹಂಚಿಕೊಂಡರು.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಶೇಕಡಾ ೮೨ರಷ್ಟು ಚರ್ಚೆ, ಫಲಪ್ರದ ಮಾತುಕತೆಗಳು ನಡೆದರೆ ರಾಜ್ಯಸಭೆಯಲ್ಲಿ ಶೇಕಡಾ 47ರಷ್ಟಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಇನ್ನು ರಾಜ್ಯಸಭೆಯಲ್ಲಿ ಆದ ಕಲಾಪಗಳ ಬಗ್ಗೆ ಸಭಾಪತಿ ಎಂ ವೆಂಕಯ್ಯ ನಾಯ್ಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪದೇ ಪದೇ ಗದ್ದಲವಾಗಿದ್ದರಿಂದ ತನ್ನ ಸಾಮರ್ಥ್ಯಕ್ಕಿಂತ ಕಡಿಮೆ ಮಟ್ಟದಲ್ಲಿ ಮೇಲ್ಮನೆಯಲ್ಲಿ ಕಲಾಪ ನಡೆದಿದೆ, ಇದನ್ನು ಬಹಳ ಬೇಸರದಿಂದ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

× Chat with us