‘ಓಮಿಕ್ರಾನ್’ ಸೋಂಕಿತ ವೈದ್ಯ ಗುಣಮುಖ

‘ಮೊನೊಕ್ಲೋನಲ್ ಆಂಟಿಬಾಡಿ ಥೆರಪಿ’ ಚಿಕಿತ್ಸೆ ಪರಿಣಾಮಕಾರಿ

ಬೆಂಗಳೂರು: ಕೋವಿಡ್-19 ಹಾಗೂ ಡೆಲ್ಟಾ ವೇರಿಯಂಟ್ ನಂತರ ಇಡೀ ವಿಶ್ವನ್ನೇ ಕಾಡುತ್ತಿರುವ ಕೋವಿಡ್ ರೂಪಾಂತರಿ ಹೊಸತಳಿ ಓಮಿಕ್ರಾನ್ ಸೋಂಕಿತ ದೇಶದ ಮೊದಲ ವ್ಯಕ್ತಿ ಬೆಂಗಳೂರಿನ ವೈದ್ಯ ಇದೀಗ ಸಂಪುರ್ಣ ಗುಣಮುಖರಾಗಿದ್ದಾರೆ.

ಕೇವಲ 10-12 ದಿನಗಳಲ್ಲಿ ಗುಣಮುಖರಾಗಿರುವುದು ವೈದ್ಯಕೀಯ ವಲಯ ನಿಟ್ಟುಸಿರುಬಿಡುವಂತೆ ಮಾಡಿದೆ. ಓಮಿಕ್ರಾನ್ ರೂಪಾಂತರ ಸೋಂಕಿಗೆ ’ಮೊನೊಕ್ಲೋನಲ್ ಆಂಟಿಬಾಡಿ ಥೆರಪಿ’ ಚಿಕಿತ್ಸೆಯಾಗಬಹುದೇ ಎಂಬ ಸಣ್ಣದೊಂದು ಆಶಾವಾದ ಇದೀಗ ತಲೆ ಎತ್ತಿದೆ.

ಓಮಿಕ್ರಾನ್ ಸೋಂಕಿತ ವೈದ್ಯ, ಸೋಂಕಿಗೆ ತುತ್ತಾದ ಬಳಿಕ ‘ಮೊನೊಕ್ಲೋನಲ್ ಆಂಟಿಬಾಡಿ ಥೆರಪಿ’ ತೆಗೆದುಕೊಂಡಿದ್ದರು. ಇದನ್ನು ಸ್ವತಃ ವೈದ್ಯರೇ ಸ್ಪಷ್ಟಪಡಿಸಿದ್ದಾರೆ. ಅವರೀಗ ಸಂಪೂರ್ಣ ಗುಣಮುಖರಾಗಿ, ಸಮರ್ಥರಾಗಿದ್ದಾರೆ.

ಬೆಂಗಳೂರಿನಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲದೇ ಓಮಿಕ್ರಾನ್ ಸೋಂಕಿಗೆ ತುತ್ತಾಗಿ ’ಮಿಸ್ಚರಿ’ಗೆ ಕಾರಣವಾಗಿದ್ದ ಸೋಂಕಿತ ವೈದ್ಯ ಇದೀಗ ತಜ್ಞರ ಕೇಂದ್ರ ಬಿಂದುವಾಗಿದ್ದಾರೆ, ವೈದ್ಯರಿಂದ ಚಿಕಿತ್ಸೆ ಪಡೆದೇ ಆ ವೈದ್ಯ ಗುಣಮುಖರಾಗಿದ್ದು ಹೇಗೆ ಎಂಬ ಕುತೂಹಲಕಾರಿ ಅಂಶ ಇದೀಗ ಎಲ್ಲರ ತಲೆಯಲ್ಲಿ ಓಡಾಡುತ್ತಿದೆ.

ಸೋಂಕಿಗೆ ತುತ್ತಾಗಿ ರೋಗ ಲಕ್ಷಣಗಳು ಸೌಮ್ಯವಾಗಿದ್ದರೆ ಕೆಲವರು ಗುಣವಾಗುತ್ತದೆ ಎಂದು ಆ ಬಗ್ಗೆ ನಿರ್ಲಕ್ಷ್ಯವಹಿಸುತ್ತಾರೆ. ಆದರೆ ಈ ವೈದ್ಯ ಹಾಗೆ ನಿರ್ಲಕ್ಷ್ಯವಹಿಸದೇ ತೀವ್ರತೆಯ ಅಪಾಯವನ್ನು ತಡೆಗಟ್ಟಲು ಈ ’ಮೊನೊಕ್ಲೋನಲ್ ಆಂಟಿಬಾಡಿ ಥೆರಪಿ’ ಚಿಕಿತ್ಸೆಯನ್ನು ತೆಗೆದುಕೊಂಡರು. ಈ ಹಿಂದೆ ಡೆಲ್ಟಾ ರೂಪಾಂತರದಿಂದ ಉದ್ಭವವಾಗಿದ್ದ ಕೋವಿಡ್ ಸಾಂಕ್ರಾಮಿಕ ೨ನೇ ಅಲೆ ವೇಳೆ ಈ ‘ಮೊನೊಕ್ಲೋನಲ್ ಆಂಟಿಬಾಡಿ ಥೆರಪಿ’ ಸಾಕಷ್ಟು ರೋಗಿಗಳಲ್ಲಿ ಪ್ರಯೋಜನಕ್ಕೆ ಬಂದಿತ್ತು. ಸಾಕಷ್ಟು ರೋಗಿಗಳನ್ನು ಪ್ರಾಣಾಪಾಯದಿಂದ ಪಾರು ಮಾಡಿತ್ತು. ಇದೀಗ ಅದೇ ಚಿಕಿತ್ಸೆ ಓಮಿಕ್ರಾನ್ ವೈದ್ಯರಿಗೂ ನೆರವಾಗಿದೆ ಎಂದು ಹೇಳಲಾಗಿದೆ.

× Chat with us