ಸಿದ್ದು ವಿರುದ್ಧ ಘೋಷಣೆ: ತನ್ವೀರ್‌ ಸೇಠ್ ಆಪ್ತರಿಗೆ ನೋಟಿಸ್

ಮೈಸೂರು: ಮೈಸೂರು ಮಹಾನಗರಪಾಲಿಕೆ ಮೇಯರ್ ಚುನಾವಣೆಯಲ್ಲಿ ಜೆಡಿಎಸ್‌ಗೆ ಮೇಯರ್‌ ಸ್ಥಾನವನ್ನು ಬಿಟ್ಟುಕೊಟ್ಟ ಶಾಸಕ ತನ್ವೀರ್‌ಸೇಠ್ ವಿರುದ್ಧ ಅಸಮಾಧಾನಗೊಂಡಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ್ದ ಸೇಠ್ ಆಪ್ತರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

ಮೈತ್ರಿ ವಿಚಾರದಲ್ಲಿ ಅಸಮಾಧಾನಗೊಂಡಿದ್ದ ಸಿದ್ದರಾಮಯ್ಯ ತನ್ವೀರ್‌ಸೇಠ್ ವಿರುದ್ಧ ಕ್ರಮ ಜರುಗಿಸುವಂತೆ ಹೇಳಿದ್ದರಿಂದ ನೋಟಿಸ್ ಕೊಡುವ ಮಾತನ್ನು ಹೇಳಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ತನ್ವೀರ್‌ಸೇಠ್ ಬೆಂಬಲಿಗರು ಉದಯಗಿರಿಯಲ್ಲಿರುವ ಶಾಸಕರ ನಿವಾಸದ ಎದುರು ಜ.೨೬ರಂದು ಪ್ರತಿಭಟಿಸಿ ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಕೆಪಿಸಿಸಿಯು ನಗರ ಅಧ್ಯಕ್ಷ ಆರ್.ಮೂರ್ತಿ ಅವರಿಂದ ವಿವರಣೆ ಪಡೆದುಕೊಂಡು ನೋಟಿಸ್ ಜಾರಿಗೊಳಿಸುವಂತೆ ಸೂಚನೆ ನೀಡಿತ್ತು.

ಒಂದು ವಾರದ ಬಳಿಕ ನಗರ ಅಧ್ಯಕ್ಷ ಆರ್.ಮೂರ್ತಿ ಅವರು ಶಾಸಕ ತನ್ವೀರ್ ಸೇಠ್ ಆಪ್ತ ಹಾಗೂ ಎನ್.ಆರ್.ಕ್ಷೇತ್ರದ ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್, ಮುಖಂಡರಾದ ಹಬೀಬ್, ಎಂ.ಎನ್.ಲೋಕೇಶ್,ಮೊಹಮ್ಮದ್ ಇರ್ಫಾನ್, ಸಿ.ರಾಜು, ಶೆಹನಾಜ್ ಹುಸೇನ್, ಅಕ್ಬರ್ ಪಾಷ, ಸಾದಿಕ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ ೭ ದಿನಗಳ ಒಳಗೆ ಉತ್ತರ ನೀಡಬೇಕು ಎಂದು ತಿಳಿಸಿದ್ದಾರೆ. ಅಧ್ಯಕ್ಷರ ನೋಟಿಸ್‌ಗೆ ಉತ್ತರ ಬಂದ ಮೇಲೆ ಮುಂದಿನ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ.

× Chat with us