ನಿರಂಜನ ವಾನಳ್ಳಿ ಬೆಂಗಳೂರು ಉತ್ತರ ವಿವಿ ಕುಲಪತಿ

ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾಗಿರುವ ಪ್ರೊಫೆಸರ್ ನಿರಂಜನ ವಾನಳ್ಳಿ ಅವರನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ ಮಾಡಿ ರಾಜಭವನದಿಂದ ಅಧಿಸೂಚನೆ ಹೊರಡಿಸಲಾಗಿದೆ.

ಅಧಿಕಾರ ವಹಿಸಿಕೊಂಡ ದಿನದಿಂದ 4 ವರ್ಷಗಳ ಅವಧಿ ಅಥವಾ ಅವರಿಗೆ 67 ವರ್ಷ ತುಂಬುವವರೆಗೆ ಯಾವುದು ಬೇಗ ಮುಗಿಯುತ್ತದೆಯೋ ಅಲ್ಲಿಯವರೆಗೂ ಅವರು ಅಧಿಕಾರದಲ್ಲಿರಲಿದ್ದಾರೆ.

ಕೋಲಾರದಲ್ಲಿನ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಮೊದಲ ಕುಲಪತಿಯಾಗಿ ಪ್ರೊ.ಟಿ.ಡಿ.ಕೆಂಪರಾಜು 26 ಜುಲೈ, 2017 ರಲ್ಲಿ ನೇಮಕಗೊಂಡಿದ್ದರು. ಅವರ 4 ವರ್ಷಗಳ ಅವಧಿ 25 ಜುಕೈ, 2021 ರಲ್ಲಿ ಪೂರ್ಣಗೊಂಡಿತ್ತು. ಬಳಿಕ ಹಿರಿಯ ಡೀನ್ ಡಾ.ಡಿ.ಕುಮುದಾ ಅವರನ್ನು ಪ್ರಭಾರ ಕುಲಪತಿಯನ್ನಾಗಿ ನೇಮಕ ಮಾಡಲಾಗಿತ್ತು.

ಇದೀಗ ಕುಲಪತಿ ಶೋಧನಾ ಸಮಿತಿ ಶಿಫಾರಸ್ಸಿನ ಆಧಾರದ ಮೇರೆಗೆ ಪ್ರಾಧ್ಯಾಪಕ ಪ್ರೊ.ನಿರಂಜನ ವಾನಳ್ಳಿ ಅವರನ್ನು ನೂತನ ಕುಲಪತಿಯಾಗಿ ನೇಮಕ ಮಾಡಿ, ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಆದೇಶ ಹೊರಡಿಸಿದ್ದಾರೆ.

‘ಆಂದೋಲನ’ದೊಂದಿಗೆ ಮಾತನಾಡಿದ ಡಾ.ನಿರಂಜನ ವಾನಳ್ಳಿ ಅವರು, “ಸರ್ಕಾರ ಒಂದು ಅವಕಾಶ ನೀಡಿದೆ. ಇದನ್ನು ಅತ್ಯಂತ ಜವಾಬ್ಧಾರಿಯಿಂದ ನಿರ್ವಹಿಸಿ ಬೆಂಗಳೂರು ಉತ್ತರ ವಿವಿಯ ಎಲ್ಲರ ಸಹಕಾರದಿಂದ ವಿಶ್ವವಿದ್ಯಾನಿಲಯವನ್ನು ಉತ್ತಮವಾಗಿ ಹಾಗೂ ಮಾದರಿಯಾಗಿ ಬೆಳೆಸುವ ಕಾರ್ಯ ಮಾಡುತ್ತೇನೆ” ಎಂದು ಹೇಳಿದರು.

× Chat with us