ಯಡಿಯೂರಪ್ಪರನ್ನೇ ಸಿಎಂ ಆಗಿ ಮುಂದುವರಿಸಲಿ: ನಿಡುಮಾಮಿಡಿ ಸ್ವಾಮೀಜಿ

ಬೆಂಗಳೂರು: ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು ಎಂದು ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.

ಸಿಎಂ ಬದಲಾವಣೆಗೆ ಸುದ್ದಿಗೆ ಸಂಬಂಧಿಸಿದಂತೆ ತಮ್ಮ ನಿಲುವು ವ್ಯಕ್ತಪಡಿಸಲು ಸೇರಿದ್ದ ಸ್ವಾಮೀಜಿಗಳ ಸಭೆಯ ನೇತೃತ್ವ ವಹಿಸಿ ಮಾತನಾಡಿದ್ದಾರೆ. ಜಾತಿ, ಮತ ಮೀರಿದ ನಾಯಕ ಯಡಿಯೂರಪ್ಪ. ಅವರು ಕೇವಲ ಲಿಂಗಾಯತ ನಾಯಕರಾಗಲಿಲ್ಲ. ಸರ್ವ ಜನಾಂಗದ ಪ್ರೀತಿ-ವಿಶ್ವಾಸ ಗಳಿಸಿದ್ದಾರೆ. ಅವರಿಗೆ ವಯಸ್ಸಾಗಿದೆ ಎಂದು ಹೇಳಿ ಅಧಿಕಾರದಿಂದ ಕೆಳಗಿಳಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ 75 ವಯಸ್ಸು ಮೀರಿದ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿ, ಬಿಜೆಪಿ ಚುನಾವಣೆ ಎದುರಿಸಿತ್ತು. ಆದರೆ, ವಯಸ್ಸಾಯಿತು ಎಂಬ ಕಾರಣ ನೀಡಿ ಯಡಿಯೂರಪ್ಪರನ್ನು ಕೆಳಗಿಳಿಸುವ ಪ್ರಯತ್ನಗಳು ನಡೆಯುತ್ತಿವೆ. ಪಕ್ಷವು ಒಂದೊಂದು ಕಡೆ ಒಂದೊಂದು ನಿಯಮ ಪಾಲಿಸಬಾರದು. ಬಿಜೆಪಿಯಲ್ಲಿ ಸದ್ಯ, ಯಡಿಯೂರಪ್ಪನವರಿಗೆ ಸಾಟಿಯಾಗಬಲ್ಲ ಮತ್ತೊಬ್ಬ ನಾಯಕ ರಾಜ್ಯದಲ್ಲಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರ ರಚನೆ ವೇಳೆ ಯಡಿಯೂರಪ್ಪ ಅಪಕೀರ್ತಿಗೆ ಒಳಗಾಗಿದ್ದರು. ನಂತರ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ. ನೆರೆ, ಕೋವಿಡ್‌ನಂತಹ ಪರಿಸ್ಥಿತಿಯನ್ನೂ ಉತ್ತಮವಾಗಿ ನಿಭಾಯಿಸಿದ್ದಾರೆ. ಮಠಾಧೀಶರ ಮಾತಿಗೆ ಬಿಜೆಪಿ ನಾಯಕರು ಮನ್ನಣೆ ನೀಡಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

× Chat with us