ಉಗ್ರರಿಗೆ ಕುಮ್ಮಕ್ಕು: ಕಾಶ್ಮೀರದ 48 ಕಡೆ ಎನ್‌ಐಎ ದಾಳಿ

ಶ್ರೀನಗರ: ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಆರೋಪದ ಮೇಲೆ ಕಾಶ್ಮೀರದ 14 ಜಿಲ್ಲೆಗಳಲ್ಲಿ ಭಾನುವಾರ ಬೆಳಗ್ಗೆ ಪ್ರತ್ಯೇಕವಾದಿ ಸಂಘಟನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು ದಾಳಿ ನಡೆಸಿ ತೀವ್ರ ಶೋಧ ನಡೆಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್, ದೋಡಾ, ಕಿಶ್ತ್‌ವಾರ್, ರಂಬನ್, ಬದ್ಗಾಮ್, ರಜೌರಿ, ಶೋಪಿಯಾನ್ ಸೇರಿದಂತೆ ಇತರೆಡೆ ಏಕಕಾಲದಲ್ಲಿ ದಾಳಿಗಳನ್ನು ನಡೆಸಲಾಗಿದೆ ಎಂದು ಎನ್‌ಐಎ ಉನ್ನತಾಧಿಕಾರಿೊಂಬ್ಬರು ತಿಳಿಸಿದ್ದಾರೆ.

ಉಗ್ರರಿಗೆ ಹಣಕಾಸು ಸಹಾಯ, ಆಶ್ರಯ ಮತ್ತಿತ್ತರ ನೆರವು ನೀಡುತ್ತಿರುವ ಆರೋಪದ ಮೇಲೆ ಜಮಾತ್-ಎ-ಇಸ್ಲಾಮಿ (ಜೆಐಐ) ಮುಖಂಡರು ಮತ್ತು ಸದಸ್ಯರ ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ಸಂಬಂಧ ಕೆಲವು ಮಹತ್ವದ ಮಾಹಿತಿಗಳು ಲಭಿಸಿವೆ ಎಂದು ಅವರು ತಿಳಿಸಿದ್ದಾರೆ.

ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು 10ರಂದು ಕಾಶ್ಮೀರ ಕಣಿವೆಯ ವಿವಿಧೆಡೆ ದಾಳಿಗಳನ್ನು ನಡೆಸಿದ ಎನ್‌ಐಎ ಅಧಿಕಾರಿಗಳು ಹಲವರನ್ನು ಬಂಧಿಸಿತ್ತು. ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಆರೋಪಗಳ ಮೇಲೆ ಜಮ್ಮು-ಕಾಶ್ಮೀರ ಸರ್ಕಾರದ 11 ಉದ್ಯೋಗಿಗಳನ್ನು ಸಹ ವಜಾ ಮಾಡಲಾಗಿತ್ತು.

× Chat with us