ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಬೆಂಗಳೂರಿನ ಯುವಕ ಅರೆಸ್ಟ್

ಹೊಸದಿಲ್ಲಿ: ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆಗೆ ಸೇರಿದ ಬೆಂಗಳೂರಿನ ಮುಹಮ್ಮದ್ ತಾಖಿರ್ ಮೊಹಮ್ಮದ್ (33) ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

ಮೂಲಭೂತವಾದವನ್ನು ಪಸರಿಸಿ ಹಾಗೂ ಮುಸ್ಲಿಂ ಸಮುದಾಯದ ಯುವಕರನ್ನು ಪ್ರಚೋದಿಸಿ ಐಎಸ್ ಸಂಘಟನೆಗೆ ಸೇರಿಸಲು ಸಿರಿಯಾಕ್ಕೆ ಕಳುಹಿಸುತ್ತಿದ್ದ ಆರೋಪದ ಮೇಲೆ ಈತನನ್ನು ಶನಿವಾರವೇ ಬಂಧಿಸಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ನಿಷೇಧಿತ ಸಂಘಟನೆಯ ಜೊತೆ ನಂಟು ಹೊಂದಿದ ಆರೋಪದ ಮೇಲೆ ಮುಹಮ್ಮದ್ ಜೊತೆಗೆ ಜುಹಾಬ್ ಹಮೀದ್, ಇಫ್ರಾನ್ ನಾಸಿರ್ ಹಾಗೂ ಮೊಹಮ್ಮದ್ ಶಿಹಾಬ್ ಎಂಬ ಇತರ ಮೂವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಆರೋಪಿ ಮುಹಮ್ಮದ್, ಐಎಸ್ ನಾಯಕರ ಸಂಪರ್ಕ ಸಾಧಿಸಲು 2013ರಲ್ಲಿ ತನ್ನ ಸಹವರ್ತಿಗಳೊಂದಿಗೆ ಸಿರಿಯಾಕ್ಕೆ ಭೇಟಿ ನೀಡಿದ್ದ. ಭಾರತದ ಮುಸ್ಲಿಮರ ಬೆಂಬಲ ಒದಗಿಸುವುದಾಗಿಯೂ ಹೇಳಿದ್ದ.

ಮುಹಮದ್ ವಿಚಾರಣೆಯಿಂದ ಕೆಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

× Chat with us