ನಾಲ್ಕು ವರ್ಷಗಳ ಪದವಿ ಸಾಧಕ-ಬಾಧಕಗಳೇನು?

ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೊಳಿಸುವ ಸಂಬಂಧ ‘ಉದ್ದೇಶಿತ ಪಠ್ಯಕ್ರಮ ಚೌಕಟ್ಟು ನಿಗದಿ’ಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ನಾಲ್ಕು ವರ್ಷಗಳ ಪದವಿ ಕೋರ್ಸ್ ಜಾರಿಗೊಳಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಅಗತ್ಯ ಸಿದ್ಧತೆ ಮಾಡಕೊಳ್ಳಬೇಕಿದೆ. ಮೈಸೂರು ವಿಶ್ವವಿದ್ಯಾನಿಲಯವೂ ಈಗಾಗಲೇ ಈ ಕುರಿತು ಚರ್ಚೆ ನಡೆಸುತ್ತಿದೆ. ಒಂದು ವೇಳೆ ನಾಲ್ಕು ವರ್ಷಗಳ ಪದವಿ ಕೋರ್ಸ್‌ ಗಳನ್ನು ಆರಂಭಿಸಿದರೆ ಎದುರಾಗುವ ಸವಾಲುಗಳೇನು? ನಾಲ್ಕು ವರ್ಷಗಳ ಕೋರ್ಸ್‌ನಿಂದ ಆಗುವ ಪ್ರಯೋಜನಗಳೇನು? ಎಂದು ಇಲ್ಲಿ ಚರ್ಚಿಸಲಾಗಿದೆ.
* ಯತಿರಾಜ್ ಬ್ಯಾಲಹಳ್ಳಿ
ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ-೨೦೨೦) ಜಾರಿಯ ಸಂಬಂಧ ರಾಜ್ಯ ಸರ್ಕಾರ ‘ಉದ್ದೇಶಿತ ಪಠ್ಯಕ್ರಮ ಚೌಕಟ್ಟು ನಿಗದಿ’ ಬಿಡುಗಡೆ ಮಾಡಿದೆ. ಎನ್‌ಇಪಿ-೨೦೨೦ ನಾಲ್ಕು ವರ್ಷಗಳ ಪದವಿಯ ಕುರಿತು ಶಿಫಾರಸ್ಸು ಮಾಡಿದ್ದು, ಅದರ ಸಾಧಕ ಬಾಧಕಗಳ ಕುರಿತು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ ನಾಲ್ಕು ವರ್ಷಗಳ ಪದವಿ ಕೋರ್ಸ್ ಚರ್ಚೆ ಈಚಿನದ್ದೇನೂ ಅಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗಲೇ ದೆಹಲಿ ವಿಶ್ವವಿದ್ಯಾನಿಲಯ ನಾಲ್ಕು ವರ್ಷಗಳ ಪದವಿ ಕೋರ್ಸ್‌ಗೆ ಮುಂದಾಗಿತ್ತು. ಯುಜಿಸಿ ಅದಕ್ಕೆ ಒಪ್ಪಿಗೆಯನ್ನೂ ನೀಡಿತ್ತು. ಆಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ವಿರೋಧಿಸಿತ್ತು. ೨೦೧೪ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ, ಅಂದಿನ ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿಯವರು ಹೊಸ ಶಿಕ್ಷಣ ಮಾದರಿಯನ್ನು ರದ್ದುಮಾಡಿದರು. ಯುಜಿಸಿ ಮುಖ್ಯಸ್ಥರಾಗಿದ್ದ ವೇದಪ್ರಕಾಶ್ ತಮ್ಮ ಸ್ಥಾನವನ್ನು ತೊರೆದರು. ನಂತರದ ಆರು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಹೊಸ ಶಿಕ್ಷಣ ನೀತಿ ಮತ್ತದೇ ನಾಲ್ಕು ವರ್ಷಗಳ ಪದವಿಗೆ ಒತ್ತು ನೀಡಿದೆ.
ನಾಲ್ಕು ವರ್ಷಗಳ ಪದವಿ ಸಂಬಂಧ ‘ಆಂದೋಲನ’ ಪತ್ರಿಕೆಗೆ ಪ್ರತಿಕ್ರಿಸಿದ ವಿಶ್ರಾಂತ ಕುಲಪತಿ ಡಾ.ಪಿ. ವೆಂಕಟರಾಮಯ್ಯ, ‘ನಮ್ಮ ದೇಶದಿಂದ ಹೊರದೇಶ ಗಳಿಗೆ ವ್ಯಾಸಂಗಕ್ಕೆ ಹೋಗುವವರಿಗೆ ಯಾವುದೇ ವ್ಯತ್ಯಾಸಗಳು, ಗೊಂದಲ ಗಳು ಎದುರಾಗಬಾರದು ಎಂಬುದು ಎನ್‌ಇಪಿಯ ಮೊದಲ ಉದ್ದೇಶ. ನಾಲ್ಕು ವರ್ಷಗಳ ಪದವಿ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಮತ್ತು ನಿರ್ಗಮನದ ಆಯ್ಕೆಯನ್ನು ನೀಡಲಾಗಿದೆ. ಒಂದು ವರ್ಷ ವ್ಯಾಸಂಗ ಮಾಡಿ, ನಂತರ ವ್ಯಾಸಂಗ ನಿಲ್ಲಿಸಿದರೂ ವಿದ್ಯಾರ್ಥಿಗೆ ಒಂದು ವರ್ಷದ ಸರ್ಟಿಫಿಕೇಟ್ ಸಿಗುತ್ತದೆ. ಎರಡು ವರ್ಷಕ್ಕೆ, ಮೂರು ವರ್ಷಕ್ಕೆ ನಿಲ್ಲಿಸಿದರೂ ಸರ್ಟಿಫಿಕೇಟ್ ದೊರಕುತ್ತದೆ. ಹೀಗಾಗಿ ಅಗತ್ಯವಿದ್ದಾಗ ಓದು ನಿಲ್ಲಿಸಿ, ಮತ್ತೆ ಅಗತ್ಯವಿದ್ದಾಗ ಓದು ಮುಂದುವರಿಸಬಹುದು. ವಿದ್ಯಾರ್ಥಿಯ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ವ್ಯಾಸಂಗ ಮಾಡಬಹುದು’ ಎನ್ನುತ್ತಾರೆ. ‘ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಿಬಿಜೆಡ್, ಎಚ್‌ಇಪಿ ಈ ರೀತಿಯಲ್ಲಿ ಮೂರು ವಿಷಯಗಳ ಕಾಂಬಿನೇಷನ್‌ಗಳನ್ನು ಬಿಗಿಯಾಗಿ ಜಾರಿಗೊಳಿಸಲಾಗಿದೆ. ಅಂತಹ ನಿರ್ಬಂಧಗಳು ಎನ್‌ಇಪಿಯಲ್ಲಿ ಇರುವುದಿಲ್ಲ. ವಿದ್ಯಾರ್ಥಿಯೊಬ್ಬ ಭೌತವಿಜ್ಞಾನದ ಜೊತೆಗೆ ಅರ್ಥಶಾಸ್ತ್ರವನ್ನೂ ಓದಬಹುದು. ಅಂದರೆ ಅಭಿರುಚಿಗೆ ತಕ್ಕಂತೆ ಅಧ್ಯಯನ ಮಾಡಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡು ಈ ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕು. ಇಲ್ಲವಾದರೆ ಪ್ರಯೋಜನವಾಗದು’ ಎಂಬುದು ಅವರ ಅಭಿಪ್ರಾಯ.
ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗ್ಡೆ ಅವರು ಪ್ರತಿಕ್ರಿಯಿಸಿ, ‘ಎನ್‌ಇಪಿ ಸಂಬಂಧ ವಿಶ್ವವಿದ್ಯಾನಿಲಯಗಳು ಚರ್ಚಿಸಲು ಸರ್ಕಾರ ಅವಕಾಶ ನೀಡಬೇಕು. ಎನ್‌ಇಪಿ ಜಾರಿಗೊಳಿಸಲು ಎಲ್ಲ ವಿವಿಗಳೂ ಸುಸಜ್ಜಿತವಾಗಿಲ್ಲ. ಹಣಕಾಸಿನ ತೊಂದರೆ ಎದುರಾಗುತ್ತದೆ. ಕೇಂದ್ರ ಸರ್ಕಾರವೇನೋ ನೀತಿಗಳನ್ನು ಮಾಡಿಬಿಡುತ್ತದೆ, ಆದರೆ ಜಾರಿಗೊಳಿಸಬೇಕಿರುವುದು ರಾಜ್ಯ ಸರ್ಕಾರಗಳಲ್ಲವೇ?’ ಎಂದು ಪ್ರಶ್ನಿಸುತ್ತಾರೆ.
ಪಠ್ಯ ಹೇಗಿರಬಹುದು?
ಸರ್ಕಾರದ ನಡೆಗೆ ಅನುಗುಣವಾಗಿ ಎನ್‌ಇಪಿ ಜಾರಿಗೆ ಮೈಸೂರು ವಿವಿ ಚರ್ಚಿಸುತ್ತಿದೆ. ಈ ಶೈಕ್ಷಣಿಕ ಅವಧಿಯ ಮೊದಲ ವರ್ಷ ಎನ್‌ಇಪಿ ಪರಿಚಯಿಸಲು ಯೋಚಿಸಲಾಗುತ್ತಿದೆ ಎನ್ನುತ್ತಾರೆ ವಿವಿಯ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್. ‘ಒಂದೇ ಮೇಜರ್ ನಿಗದಿಮಾಡಬೇಕು ಎನ್ನುತ್ತಿದೆ ಸರ್ಕಾರ. ಅದರ ಕುರಿತು ಚರ್ಚೆಯಾಗುತ್ತಿದೆ. ವಿದ್ಯಾರ್ಥಿಗಳು ಒಂದು ವರ್ಷದ ನಂತರ ಬಿಟ್ಟು ಹೋಗಲು ಅವಕಾಶ ಇರುವುದರಿಂದ ಅದಕ್ಕೆ ತಕ್ಕಂತೆ ಪಠ್ಯ ರೂಪಿಸಬೇಕು. ಅಂದರೆ ಆತನ ವಿದ್ಯಾ ಅರ್ಹತೆಗೆ ಅನುಗುಣವಾಗಿ ಉದ್ಯೋಗವಕಾಶಗಳು ಇರಬಹುದು. ಬಹು ಶಿಸ್ತೀಯ ಪಠ್ಯ ಅಳವಡಿಕೆ ಇರುವುದರಿಂದ ಎಷ್ಟು ನಿಗದಿ ಮಾಡಬೇಕು, ಯಾವುದನ್ನು ನಿಗದಿ ಮಾಡಬೇಕು ಎಂಬ ಚರ್ಚೆಯಾಗುತ್ತಿದೆ’ ಎನ್ನುತ್ತಾರೆ ಹೇಮಂತ್‌ಕುಮಾರ್.
***
ಮಲ್ಟಿ ಫ್ಯಾಕಲ್ಟಿ ಕಾಲೇಜುಗಳು ಅಗತ್ಯ
ಎನ್‌ಇಪಿ ಜಾರಿ ಯಾಗಬೇಕಾದರೆ ಅಧ್ಯಾ ಪಕರು ಮಾನಸಿಕವಾಗಿ ಸಿದ್ಧವಾಗಬೇಕು. ಮಾನಸಗಂಗೋತ್ರಿಯಂತಹ ವಾತಾವರಣದಲ್ಲಿ ಎನ್‌ಇಪಿ ಜಾರಿ ಸಾಧ್ಯವಾದರೂ ನನ್ನ ಆತಂಕ ಇರುವುದು ಕಾಲೇಜುಗಳ ಕುರಿತು. ಪ್ರತಿ ಕಾಲೇಜೂ ಮಲ್ಟಿ ಫ್ಯಾಕಲ್ಟಿ ಕಾಲೇಜುಗಳಾಗಬೇಕು ಎಂದು ಎನ್‌ಇಪಿ ಸೂಚಿಸುತ್ತದೆ. ಹಲವು ವಿಷಯಗಳನ್ನು ಬೋಧನೆ ಮಾಡುವ ವಾತಾವರಣ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇರಬೇಕಾಗುತ್ತದೆ.
– ಡಾ.ಪಿ.ವೆಂಕಟರಾಮಯ್ಯ, ವಿಶ್ರಾಂತ ಕುಲಪತಿ, ಕುವೆಂಪು ವಿವಿ
***
ನಿರ್ಗಮನ ಅವಕಾಶ ನಿಷ್ಪ್ರಯೋಜಕ
ಸರ್ಕಾರ ಖಚಿತ ನಿರ್ಧಾರ ತೆಗೆದುಕೊಂಡಿಲ್ಲ. ಮೊದಲ ವರ್ಷದಲ್ಲೇ ಸರ್ಟಿಫಿಕೇಟ್ ಕೊಡಲು ಅವಕಾಶವಿದೆ. ಮೊದಲ ವರ್ಷ ಅಧ್ಯಯನ ಮುಗಿಸಿ ನಿರ್ಗಮಿಸಲು ಅವಕಾಶವಿದೆ ಎನ್ನುತ್ತದೆ ಎನ್‌ಇಪಿ. ಆದರೆ ಈಗ ಪದವಿ ಪೂರ್ಣಗೊಳಿಸಿದವರಿಗೇ ಉದ್ಯೋಗವಿಲ್ಲ. ಹೀಗಿರುವಾಗ ಒಂದು ವರ್ಷದ ಸರ್ಟಿಫಿಕೇಟ್ ತೆಗೆದುಕೊಂಡು ವಿದ್ಯಾರ್ಥಿ ಎಲ್ಲಿಗೆ ಹೋಗುತ್ತಾನೆ? ಸಿಬ್ಬಂದಿಯ ಕೊರತೆಯೇ ನಿಜವಾದ ಸಮಸ್ಯೆ. ಬ್ಯಾಕ್‌ಲಾಗ್ ಹುದ್ದೆಗಳು ಭರ್ತಿಯಾಗಿಲ್ಲ. ಅತಿಥಿ ಉಪನ್ಯಾಸಕರಿಂದ ಎಷ್ಟು ವರ್ಷ ತರಗತಿ ನಡೆಸುತ್ತೀರಿ?
– ಪ್ರೊ.ಎಸ್.ಎನ್.ಹೆಗ್ಡೆ, ವಿಶ್ರಾಂತ ಕುಲಪತಿ, ಮೈಸೂರು ವಿವಿ
***
ಅನುಕೂಲಕ್ಕೆ ತಕ್ಕಂತೆ ಅವಕಾಶ
ಬಹುಶಿಸ್ತೀಯ ಶಿಕ್ಷಣಕ್ಕೆ ಎನ್‌ಇಪಿಯಲ್ಲಿ ಅವಕಾಶ ಇರುವುದರಿಂದ ಒಂದೇ ವರ್ಷದಲ್ಲಿ ಎನ್‌ಇಪಿಯ ಅಳವಡಿಸಿಕೆ ಸಾಧ್ಯವಾಗದು. ಅದು ಹಂತಹಂತವಾಗಿ ಆಗಬೇಕು. ನಮ್ಮ ಅನುಕೂಲಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿಕೊಳ್ಳಲು ಎನ್‌ಇಪಿ ಅವಕಾಶ ನೀಡಿದೆ. ಉದಾಹರಣೆಗೆ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ಇಲ್ಲಿನ ಶಾರದಾ ವಿಲಾಸ ಕಾಲೇಜಿನಲ್ಲಿರುವ ಒಂದು ಕೋರ್ಸ್ ಓದಲು ಅವಕಾಶವಿದೆ. ಅದಕ್ಕೆ ತಕ್ಕಂತೆ ನಾವು ವ್ಯವಸ್ಥೆ ಮಾಡಿಕೊಳ್ಳಬೇಕು. ಮೊದಲು ಉಪನ್ಯಾಸಕರಿಗೆ ಎನ್‌ಇಪಿ ಅರ್ಥವಾಗಬೇಕು.
– ಪ್ರೊ.ಜಿ.ಹೇಮಂತ್‌ಕುಮಾರ್, ಕುಲಪತಿ, ಮೈಸೂರು ವಿವಿ
ne
× Chat with us