ವಿವಿಯ 12ವಿಭಾಗಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ:ಪ್ರೊ.ಜಿ.ಹೇಮಂತ್ ಕುಮಾರ್

 

ಮೈಸೂರು: ಮೈಸೂರು ವಿವಿಯ ೧೨ ವಿಭಾಗಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾಹಿತಿ ನೀಡಿದರು.
ಮಾನಸಗಂಗೋತ್ರಿ ವಿಜ್ಞಾನಭವನದಲ್ಲಿ ಬುಧವಾರ ಆಯೋಜಿಸಿದ್ದ ʻರಾಷ್ಟ್ರೀಯ ಶಿಕ್ಷಣ ನೀತಿ-೨೦೨೦- ಭವಿಷ್ಯ ಮತ್ತು ಮುಂದಿನ ದಾರಿʼ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಎನ್‌ಇಪಿ ಅಳವಿಡಿಸಕೊಳ್ಳುವ ಬಗ್ಗೆ ಕೆಲವು ವಿಭಾಗಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೌಲ್ಯಮಾಪನ, ಪಠ್ಯ ಸೇರಿ ಹಲವು ವಿಭಾಗಗಳಿಂದ ಸಮಸ್ಯೆಗಳು ಕೇಳಿ ಬಂದಿವೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬದಲಾವಣೆಗೆ ಎಲ್ಲ ರೀತಿಯ ಅವಕಾಶವಿದೆ. ಹಾಗಾಗಿ, ಸಮಾಜ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿಯಾಗುವ ಕೋರ್ಸ್‌ಗಳನ್ನು ಆರಂಭಿಸುವುದು ಮುಖ್ಯ. ಶೀಘ್ರವೇ ಸಮಿತಿಗಳನ್ನು ರಚಿಸಿಕೊಂಡು ಕೋರ್ಸ್‌ಗಳನ್ನು ಆರಂಭಿಸುವ ಬಗ್ಗೆ ನೀಲನಕ್ಷೆ ಸಿದ್ಧಪಡಿಸುವುದು ಉತ್ತಮ ಎಂದು ಸೂಚಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯು ಬಹಮುಖಿಯಾಗಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಕೌಶಲಗಳ ಕಲಿಕೆಗೆ ಸಹಕಾರಿಯಾಗಲಿದೆ. ಈ ಕಾರ್ಯವು ಒಂದು ದಿನದಲ್ಲಿ ನಡೆಯುವಂತಹದ್ದಲ್ಲ. ಶೈಕ್ಷಣಿಕವಾಗಿ ವ್ಯವಸ್ಥೆ ಬದಲಾಗಲಿದ್ದು, ಪದವಿ, ಸ್ನಾತಕೋತ್ತರ ಪದವಿಗಳ ಪಠ್ಯಕ್ರಮ ಬದಲಾಗಲಿದೆ. ಈ ಕುರಿತಂತೆ ಸರ್ಕಾರವೇ ಮಾದರಿ ಪಠ್ಯಕ್ರಮವನ್ನು ಸಿದ್ಧಪಡಿಸಲಿದೆ ಎಂದು ಮಾಹಿತಿ ನೀಡಿದರು.
ಮೈಸೂರು ವಿವಿ ವಾಣಿಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಯಶವಂತ ಡೋಂಗ್ರೆ ಮಾತನಾಡಿ, ಮುಂದಿನ ೧೫ ವರ್ಷಗಳಲ್ಲಿ ಪದವಿ ನೀಡಲು ವಿಶ್ವವಿದ್ಯಾಲಯಗಳ ಅನುಮತಿ ಪಡೆಯುವ ಪ್ರಕ್ರಿಯೆ ಇರುವುದಿಲ್ಲ. ಸ್ವಾಯತ್ತ ಪಡೆದ ಕಾಲೇಜುಗಳಿಂದಲೇ ಪದವಿ ನೀಡುವ ಪ್ರಕ್ರಿಯೆ ಬರಲಿದೆ. ದೇಶದಲ್ಲಿ ಸುಮಾರು ೩೦ ಕಾಲೇಜುಗಳು ಈಗಾಗಲೇ ಈ ಪ್ರಕ್ರಿಯೆಯನ್ನು ಒಳಗೊಂಡಿವೆ ಎಂದು ಹೇಳಿದರು. ಮೈಸೂರು ವಿವಿ ಕುಲಚಿವ ಪ್ರೊ.ಆರ್.ಶಿವಪ್ಪ, ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನಗಳ ನಿರ್ದೇಶಕರಾದ ಡಾ.ಬಿ.ಎಸ್.ಪದ್ಮಾವತಿ, ಪ್ರೊ.ಜನಾರ್ಧನ್, ಪ್ರೊ.ಎನ್.ಲೋಕನಾಥ್ ಇನ್ನಿತರರು ಭಾಗವಹಿಸಿದ್ದರು.

× Chat with us